2 ಸಾವಿರ ರೂ. ನೋಟಿಗೆ ಚಿಲ್ಲರೆ ನೀಡಲು ನಿರಾಕರಣೆ-ಬಿ.ಸಿ.ರೋಡ್ ಎಸ್‌ಬಿಐಯಲ್ಲಿ ಗೊಂದಲ

ಬಂಟ್ವಾಳ, ಫೆ.27: ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾ ಬಿ.ಸಿ.ರೋಡ್ ಶಾಖೆಯ ಎಟಿಎಂನಿಂದ ಶಿಕ್ಷಕಿಯೊಬ್ಬರು ಡ್ರಾ ಮಾಡಿದ ನಗದಿನಲ್ಲಿ 2,000 ರೂ. ಮುಖ ಬೆಲೆಯ ಎರಡು ನೋಟುಗಳು ನಕಲಿ ಎಂದು ಶಂಕೆ ವ್ಯಕ್ತಪಡಿಸಿದ ಬ್ಯಾಂಕಿನ ಸಿಬ್ಬಂದಿಯ ಎಡವಟ್ಟಿನಿಂದಾಗಿ ಬ್ಯಾಂಕ್‌ನ ಒಳಗೆ ಕೆಲವೊತ್ತು ಗೊಂದಲದ ವಾತಾವರಣ ನಿರ್ಮಾಣವಾದ ವಿದ್ಯಮಾನ ಸೋಮವಾರ ನಡೆಯಿತು.
ಎಟಿಎಂನಿಂದ ಮೂವತ್ತು ಸಾವಿರ ರೂ. ನಗದನ್ನು ಡ್ರಾ ಮಾಡಿದ ಶಿಕ್ಷಕಿಯೊಬ್ಬರು ಬಳಿಕ ಚಿಲ್ಲರೆಗಾಗಿ ಬ್ಯಾಂಕ್ ಒಳಗಿನ ಕ್ಯಾಶ್ ಕೌಂಟರ್‌ಗೆ ತೆರಳಿ 2000 ರೂ. ಮುಖಬೆಲೆಯ ಎರಡು ನೋಟ್‌ಗಳನ್ನು ನೀಡಿದಾಗ ಬ್ಯಾಂಕ್ ಸಿಬ್ಬಂದಿ ಅದೆರಡು ನೋಟುಗಳು ನಕಲಿ ನೋಟುಗಳೆಂದು ಹೇಳಿ ಚಿಲ್ಲರೆ ನೀಡಲು ನಿರಾಕರಿಸಿದಲ್ಲದೆ ಬ್ಯಾಂಕಿನಲ್ಲಿದ್ದ ಗ್ರಾಹಕರ ಸಮ್ಮುಖದಲ್ಲಿ ಶಿಕ್ಷಕಿಯನ್ನು ಅವಮಾನಿಸುವ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಸಂದರ್ಭದಲ್ಲಿ ಶಾಖಾ ವ್ಯವಸ್ಥಾಪಕರು ಹಾಗೂ ಇತರೆ ಸಿಬ್ಬಂದಿ ಕೂಡ ಶಿಕ್ಷಕಿಯದ್ದೆ ತಪ್ಪು ಎಂಬಂತೆ ವರ್ತಿಸಿದ್ದಾರೆ ಎನ್ನಲಾಗಿದ್ದು ಇದರಿಂದ ಅಸಮಾಧಾನಗೊಂಡ ಶಿಕ್ಷಕಿ ಬ್ಯಾಂಕ್ ಸಿಬ್ಬಂದಿ ಸಹಿತ ವ್ಯವಸ್ಥಾಪಕರನ್ನು ನೇರ ತರಾಟೆಗೆ ತೆಗೆದುಕೊಂಡರು. ಈ ವೇಳೆ ಇತರ ಗ್ರಾಹಕರು ಕೂಡ ಶಿಕ್ಷಕಿಯ ಪರ ವಾದಿಸಿದ್ದು ಪರಿಣಾಮ ಬ್ಯಾಂಕಿನಲ್ಲಿ ಕೆಲಹೊತ್ತು ಗೊಂದಲದ ವಾತಾವರಣ ಉಂಟಾಯಿತು. ಯಾವುದೇ ತಪ್ಪು ಮಾಡದಿದ್ದರೂ, 2000 ರೂ. ಎಟಿಎಂನಿಂದ ಡ್ರಾ ಮಾಡಿದ ನೋಟಾಗಿದ್ದರೂ ಚಿಲ್ಲರೆ ಕೇಳಿದಾಗ ಬ್ಯಾಂಕ್ ಸಿಬ್ಬಂದಿಯ ವರ್ತನೆಯಿಂದ ನನಗೆ ಅವಮಾನವಾಗಿದೆ. ಬ್ಯಾಂಕ್ ಸಿಬ್ಬಂದಿ ಕ್ಷಮೆ ಕೋರುವಂತೆ ಪಟ್ಟು ಹಿಡಿದ ಶಿಕ್ಷಕಿ ಈ ಹಿಂದೆ ಕೂಡ ಇದೇ ಬ್ಯಾಂಕ್ ಸಿಬ್ಬಂದಿ ಇದೇ ರೀತಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಸುದ್ದಿ ತಿಳಿದ ಬಂಟ್ವಾಳ ನಗರ ಪೊಲೀಸರು ಸ್ಥಳಕ್ಕಾಗಮಿಸಿ ಬ್ಯಾಂಕ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.
ಕೊನೆಗೆ ಶಿಕ್ಷಕಿಗೆ ಅದೇ ಎರಡು ಸಾವಿರದ ನೋಟಿಗೆ ನೂರರ ನೋಟಿನ ಚಿಲ್ಲರೆ ನೀಡಿ ಗೊಂದಲಕ್ಕೆ ತೆರೆ ಎಳೆದರು.
ಖಾತೆ ಹಿಂತೆಗೆತ: ಈ ಬ್ಯಾಂಕಿನ ಕೆಲ ಸಿಬ್ಬಂದಿಯ ವರ್ತನೆಗೆ ಬೇಸತ್ತು ಈಗಾಗಲೇ ಹಲವಾರು ಶಿಕ್ಷಕ, ಶಿಕ್ಷಕಿಯರು ತಮ್ಮ ಖಾತೆಯನ್ನೆ ಹಿಂತೆಗೆದು ಕೊಂಡಿದ್ದಾರೆ ಎಂದು ಇದೇ ಸಂದರ್ಭದಲ್ಲಿ ನೊಂದ ಶಿಕ್ಷಕಿ ತಿಳಿಸಿದ್ದಾರೆ.
ಕನ್ನಡಿಗರನ್ನು ನಿಯುಕ್ತಿಗೊಳಿಸಿ: ಎಸ್‌ಬಿಐನ ಬಿ.ಸಿ.ರೋಡು ಶಾಖೆಯಲ್ಲಿ ಒಂದಿಬ್ಬರ ಹೊರತುಪಡಿಸಿ ಶಾಖಾಧಿಕಾರಿ ಸಹಿತ ಬಹುತೇಕ ಮಂದಿ ಹಿಂದಿ, ಇಂಗ್ಲೀಷ್ ಭಾಷೆ ಮಾತ್ರ ಬಲ್ಲವರಾಗಿದ್ದಾರೆ. ಹಾಗಾಗಿ ಇಲ್ಲಿನ ಗ್ರಾಹಕರು ಕೂಡ ವ್ಯವಹಾರದ ವೇಳೆ ಚಡಪಡಿಸುವಂತಾಗಿದೆ. ಗ್ರಾಮೀಣ ಭಾಗದ ಜನಸಾಮಾನ್ಯರು ವ್ಯವಹಾರದ ಸಂದರ್ಭದಲ್ಲಿ ಭಾಷೆಯ ತಿಳುವಳಿಕೆಯಿಲ್ಲದೆ ಗೊಂದಲಕ್ಕೊಳಗಾಗುವುದೂ ಇದೆ ಎಂದು ಆರೋಪಿಸಿದ ಶಿಕ್ಷಕಿ ಸಹಿತ ಇಲ್ಲಿನ ಗ್ರಾಹಕರು ಬ್ಯಾಂಕ್‌ನಲ್ಲಿ ಕನ್ನಡ ಬಲ್ಲ ಸಿಬ್ಬಂದಿಯನ್ನು ನೇಮಿಸುವಂತೆ ಆಗ್ರಹಿಸಿದರು.







