ಆಸ್ಕರ್ ಕೆಂಪು ಹಾಸಿನಲ್ಲಿ ಗಮನ ಸೆಳೆದ ಸಿರಿಯನ್ ನಿರಾಶ್ರಿತೆ

ಲಾಸ್ ಏಂಜಲಿಸ್, ಫೆ. 27 : ಆಸ್ಕರ್ ಪ್ರಶಸ್ತಿಗೆ ಆಯ್ಕೆಯಾಗಿರುವ ಸಾಕ್ಷ್ಯ ಚಿತ್ರ ‘ವತಾನಿ -ಮೈ ಹೋಮ್ ಲ್ಯಾಂಡ್’ ಕಥೆಯ ಮುಖ್ಯ ಕಥಾವಸ್ತು ಸಿರಿಯನ್ ನಿರಾಶ್ರಿತೆ ಹಲಾ ಕಾಮಿಲ್ ಅವರ ಜೀವನವಾಗಿದೆ. ಈಕೆ ಆಸ್ಕರ್ ಕೆಂಪು ಹಾಸಲ್ಲಿ ನೇರಳೆ ಬಣ್ಣದ ವೆಲ್ವೆಟ್ ಗವನ್ ಹಾಗೂ ಅದಕ್ಕೆ ಸರಿ ಹೊಂದುವ ಹಿಜಾಬ್ ಧರಿಸಿ ನಡೆದುಕೊಂಡು ಬಂದು ಎಲ್ಲರ ಗಮನ ಸೆಳೆದಿದ್ದಾರೆ. ಕಾಮಿಲ್ ಅವರನ್ನು ಕ್ಯಾಟಿ ಪೆರ್ರಿ ಅವರ ಸ್ಟೈಲಿಸ್ಟ್ ಜೇಮಿ ಮಿಝ್ರ್‌ಹಿ ಅವರು ಈ ಕಾರ್ಯಕ್ರಮಕ್ಕೆ ಸಿದ್ಧಪಡಿಸಿದ್ದರು.
ಕಳೆದ ತಿಂಗಳು ಡೊನಾಲ್ಡ್ ಟ್ರಂಪ್ ಅವರು ಅಮೆರಿಕಾದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರಿಂದ ತಮಗೆ ಈ ಪ್ರಶಸ್ತಿ ಸಮಾರಂಭಕ್ಕೆ ಆಗಮಿಸಲು ಅಸಾಧ್ಯವಾಗಬಹುದೇನೋ ಎಂಬ ಭಯ ನಾಲ್ಕು ಮಕ್ಕಳ ತಾಯಿಯಾಗಿರುವ ಕಾಮಿಲ್ ಅವರಿಗೆ ಯಾವತ್ತೂ ಇತ್ತು. ಆದರೆ ಕೆಲ ಮುಸ್ಲಿಮ್ ದೇಶಗಳ ಜನರ ಅಮೆರಿಕಾ ಪ್ರವೇಶಕ್ಕೆ ಹೇರಲಾಗಿದ್ದ ನಿರ್ಬಂಧ ಇತ್ತೀಚೆಗೆ ತೆರವುಗೊಂಡಿರುವುದು ಕಾಮಿಲ್ ಗೆ ಅಮೇರಿಕಾ ಪ್ರಯಾಣ ಬೆಳೆಸುವುದು ಸುಲಭವಾಯಿತು. ಈ ಸಮಾರಂಭಕ್ಕೆ ಯಾವ ಉಡುಪು ಧರಿಸುವುದೆಂಬ ಗೊಂದಲದಲ್ಲಿ ಆಕೆಯಿದ್ದಾಗ ಸಾಕ್ಷ್ಯ ಚಿತ್ರದ ನಿರ್ದೇಶಕಿ ಕ್ರಿಸ್ ಟೆಂಪಲ್ ಈ ಬಗ್ಗೆ ಟ್ವೀಟ್ ಮಾಡಿದ್ದೇ ತಡ ಲೇಡಿ ಗಾಗಾ ಅವರ ಸ್ಟೈಲಿಸ್ಟ್ ಬ್ರ್ಯಾಂಡನ್ ಮ್ಯಾಕ್ಸ್ ವೆಲ್ ಆಕೆಗೆ ಉಡುಪೊಂದನ್ನು ವಿನ್ಯಾಸಗೊಳಿಸಿದರು.
ಕಾಮಿಲ್ ಅವರು ತಾವು ವಿನ್ಯಾಸಗೊಳಿಸಿದ ಉಡುಪು ಧರಿಸಿ ಕೆಂಪು ಹಾಸಿನ ಮೇಲೆ ಸಾಗಿರುವುದನ್ನು ಕಂಡು ಸಂತೋಷಿಸಿರುವ ಮ್ಯಾಕ್ಸ್ ವೆಲ್ ಈ ಬಗ್ಗೆ ಟ್ವೀಟ್ ಕೂಡ ಮಾಡಿದ್ದು ಆಕೆ ಆತ್ಮವಿಶ್ವಾಸದ ಪ್ರತೀಕವೆಂಬಂತೆ ಕೆಂಪು ಹಾಸಿನ ಮೇಲೆ ನಡೆದಿದ್ದನ್ನು ಕಂಡು ಖುಷಿಯಾಗಿದೆ ಎಂದು ಹೇಳಿ ಇನ್ಸ್ಟಾಗ್ರಾಂನಲ್ಲಿ ಕಾಮಿಲ್ ಫೋಟೋ ಒಂದನ್ನೂ ಪೋಸ್ಟ್ ಮಾಡಿದ್ದಾರೆ.





