ಕೊಣಾಜೆ: ಬೆಳ್ಮ ಗ್ರಾಮ ಪಂಚಾಯತ್ ಎದುರು ನಿವೇಶನ, ಹಕ್ಕುಪತ್ರಕ್ಕಾಗಿ ಅನಿರ್ಧಿಷ್ಟಾವಧಿ ಧರಣಿ

ಕೊಣಾಜೆ, ಫೆ.27: ಬೆಳ್ಮ ಗ್ರಾಮ ಪಂಚಾಯಿತಿಯಲ್ಲಿ ಸುಮಾರು 400 ಹೆಚ್ಚು ನಿವೇಶನರಹಿತರು ನಿವೇಶನಕ್ಕಾಗಿ ಅರ್ಜಿನೀಡಿದ್ದರೂ ಯಾವುದೇ ವ್ಯವಸ್ಥೆಯಾಗಿಲ್ಲ. ಆದ್ದರಿಂದ ನಿವೇಶನ ರಹಿತರಿಗೆ ನಿವೇಶನ ಹಾಗೂ ಹಕ್ಕುಪತ್ರವನ್ನು ಒದಗಿಸಿ ಕೊಡುವಂತೆ ಆಗ್ರಹಿಸಿ ನಿವೇಶನ ರಹಿತರು ಸೋಮವಾರ ಬೆಳ್ಮ ಗ್ರಾಮ ಪಂಚಾಯಿತಿ ಎದುರು ಅನಿರ್ಧಿಷ್ಟಾವಧಿ ಧರಣಿಯನ್ನು ಆರಂಭಿಸಿದ್ದಾರೆ.
ದಲಿತ ಹಕ್ಕುಗಳ ಹೋರಾಟ ಸಮಿತಿ, ಕೋಟೆಕಾರ್ ಸರ್ಕಲ್ ಕರ್ನಾಟಕ ಪ್ರಾಂತ್ಯ, ಸಂಚಾಲನ ಸಮಿತಿ ಬೆಳ್ಮ ಗ್ರಾಮ ಇದರ ನೇತೃತ್ವದಲ್ಲಿ ನಿವೇಶನ ರಹಿತರು ಅನಿರ್ಧಿಷ್ಟಾವಧಿ ಧರಣಿಯನ್ನು ನಡೆಸುತ್ತಿದ್ದಾರೆ.
ಮಂಗಳೂರು ತಾಲೂಕಿನ ಬೆಳ್ಮ ಗ್ರಾಮದಲ್ಲಿ ಸರ್ವೆ ನಂಬರ್ 93, 51, 45, 48 ಮತ್ತು ಸರಕಾರಿ ಖಾಲಿ ಸ್ಥಳ 54 ವಿಸ್ತೀರ್ಣ 12 ಎಕ್ರೆ 35 ಸೆಂಟ್ಸ್ , ಸ.ನಂಬರ್ 33ರಲ್ಲಿ 7 ಎಕ್ರೆ 13ಸೆಂಟ್ಸ್ ಖಾಲಿ ಸ್ಥಳವಿದ್ದು, ಸರ್ವೆ ನಂಬರ್ 54ರಲ್ಲಿ 3 ಎಕ್ರೆ ಸ್ಥಳವನ್ನು ನಿವೇಶನಕ್ಕೆ ಹಸ್ತಾಂತರಿಸಲಾಗಿದ್ದರೂ ಸುಮಾರು 400ಕ್ಕೂ ಮಿಕ್ಕಿ ನಿವೇಶನ ಅರ್ಜಿಗಳು ಬಾಕಿ ಉಳಿದಿವೆ. ನಿವೇಶನ ರಹಿತರಿಗೆ ನಿವೇಶನ ಒದಗಿಸಿಕೊಡುವಂತೆ ಹೋರಾಟ ಮಾಡಿಕೊಂಡು ಬಂದರೂ ಇಷ್ಟರತನಕ ಹಕ್ಕು ಪತ್ರವೂ ಲಭಿಸಿಲ್ಲ. ಹಕ್ಕು ಪತ್ರ ಸಿಕ್ಕಿದವರಿಗೂ ಸ್ಥಳವನ್ನು ತೋರಿಸಿಕೊಟ್ಟಿಲ್ಲ ಆದ್ದರಿಂದ ನಿವೇಶನರಹಿತರಿಗೆ ಸೂಕ್ತ ನ್ಯಾಯವನ್ನು ಒದಗಿಸಿಕೊಂಡುವಂತೆ ಧರಣಿ ನಿರತರು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಧರಣಿಯ ನೇತೃತ್ವವನ್ನು ವಹಿಸಿದ ಸಂಘಟಕರು ಡಿ.ಸಿ.ಮನ್ನಾ ಜಾಗದ ಪತ್ತೆ, ನಿವೇಶನ ರಹಿತರಿಗೆ ಜಾಗವನ್ನು ಸರ್ವೆ ಮಾಡಿದ ಪ್ರಕಾರ ಗುರುತು ಮಾಡಿಕೊಡುವುದು, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಾಗವನ್ನು ಗುರುತಿಸುವುದು, ಪದವಿಪೂರ್ವ ಕಾಲೇಜು ನಿರ್ಮಾಣಕ್ಕೆ ಆಗ್ರಹ, ಅಂಬೇಡ್ಕರ್ ಭವನ ನಿರ್ಮಾಣ ಮುಂತಾದ ಬೇಡಿಕೆಗಳನ್ನು ಈಡೇರಿಸುವಂತೆ ಇದೇ ಸಂದರ್ಭದಲ್ಲಿ ಆಗ್ರಹಿಸಿದರು.
ಧರಣಿಯಲ್ಲಿ ದಲಿತ ಹಕ್ಕುಗಳ ಹೋರಾಟ ಸಮಿತಿಯ ಉಳ್ಳಾಲ ವಲಯ ಅಧ್ಯಕ್ಷರಾದ ನಾರಾಯಣ ತಲಪಾಡಿ, ದಲಿತಹಕ್ಕು ಹೋರಾಟ ಸಮಿತಿಯ ಸಂಚಾಲಕರಾದ ಲಿಂಗಪ್ಪ ನಂತೂರು, ಕಾರ್ಯದರ್ಶಿ ರೋಹಿದಾಸ್, ಪ್ರಾಂತ ರೈತ ಸಂಘ ಉಳ್ಳಾಲ ವಲಯದ ಪ್ರಧಾನ ಕಾರ್ಯದರ್ಶಿ ಜಯಂತ್ ಅಂಬ್ಲಮೊಗರು, ದಲಿತ ಹಕ್ಕು ಹೋರಾಟ ಸಮಿತಿಯ ಬೆಳ್ಮ ಗ್ರಾಮದ ಲಕ್ಷ್ಮಣ, ಬಾಬು ನಡಾರ್, ಸಂತೋಷ್ ಕುಮಾರ್, ಕರ್ನಾಟಕ ಪ್ರಾಂತ ಸಂಘ ಬೆಳ್ಮ ಇದರ ಇಬ್ರಾಹಿಂ, ಅಬೂಬಕ್ಕರ್, ಕೇಶವ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.







