2019ರ ಲೋಕಸಭಾ ಚುನಾವಣೆ ಸಂವಿಧಾನದ ಅಳಿವು ಉಳಿವಿನ ಹೋರಾಟ: ಪ್ರಕಾಶ್ ಅಂಬೇಡ್ಕರ್
wpi_prakash_ambedkar.jpg)
ಭಟ್ಕಳ, ಫೆ.27: 2019 ರ ಲೋಕಸಭಾ ಚುನಾವಣೆಯು ಸಂವಿಧಾನದ ಅಳಿವು ಉಳಿವಿನ ಹೋರಾಟವಾಗಿದ್ದು, ಸಂಘಪರಿವಾರ ಬಾಬಾ ಸಾಹೇಬರ ಸಂವಿಧಾನ ನಾಶ ಮಾಡಿ ಮನುವಿನ ಸಂವಿಧಾನ ದೇಶದ ಮೇಲೆ ಹೇರುವ ಹುನ್ನಾರ ನಡೆಸುತ್ತಿದೆ ಎಂದು ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರ ಮೊಮ್ಮಗ ಹಾಗೂ ಭರಿಪಾ ಬಹುಜನ ಮಹಾಸಂಘದ ರಾಷ್ಟ್ರೀಯ ಅಧ್ಯಕ್ಷ ಪ್ರಕಾಶ ಯಶವಂತ್ ಅಂಬೇಡ್ಕರ್ ಹೇಳಿದರು.
ಅವರು ರವಿವಾರ ಇಲ್ಲಿನ ಸಾರ್ವಜನಿಕ ಮೈದಾನದಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಯುವ ಘಟಕ ಆಯೋಜಿಸಿದ್ದ ಮಂಗಳೂರು ವಲಯದ ಯುವಜಾಗೃತಿ ದೇಶದ ಸಮೃದ್ಧಿಯುವ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಬಹುಸಂಖ್ಯಾತರಾದ ಇಲ್ಲಿನ ಹಿಂದುಳಿದ ವರ್ಗ ಹಾಗೂ ಅವರ ಸಂತರ ಧರ್ಮವನ್ನು ಹೈಜಾಕ್ ಮಾಡಿಕೊಂಡು ಬಲವಂತವಾಗಿ ಆರ್.ಎಸ್.ಎಸ್‌ನ ವೈಧಿಕ ಧರ್ಮವನ್ನು ದೇಶದ ಮೇಲೆ ಹೇರುವ ಪ್ರಯತ್ನಗಳು ನಡೆಯುತ್ತಿದ್ದು ಅದಕ್ಕಾಗಿ ರಾಜಕೀಯ ರಂಗವನ್ನು ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡಿದ್ದಾರೆ ನಾವಿಂದು ಸಾಂಸ್ಕೃತಿಕ ಹಾಗೂ ಸೈದ್ದಾಂತಿಕ ಯುದ್ದವನ್ನು ಎದುರಿಸುತ್ತಿದ್ದೇವೆ ಎಂದು ಹೇಳಿದರು.
ಸಂತರ ವಿಚಾರಧಾರೆ ವೈಧಿಕರ ಹಿಂದೂ ಧರ್ಮಕ್ಕಿಂತಲೂ ಭಿನ್ನವಾಗಿದ್ದು ನಮ್ಮ ಮೇಲೆ ಅದನ್ನು ಬಲವಂತವಾಗಿ ಹೇರುತ್ತಿದ್ದಾರೆ ಎಂದರು. ಮುಸ್ಲಿಮರು ಸಮಾನ ನಾಗರೀಕ ಸಂಹಿತೆಯನ್ನು ವಿರೋಧಿಸಬೇಕಾಗಿಲ್ಲ, ಏಕೆಂದರೆ ಮುಸ್ಲಿಮರ ವೈಯುಕ್ತಿ ಕಾನೂನು ಅದು ಸಂವಿಧಾನ ನೀಡಿದ ಹಕ್ಕು ಆದ್ದರಿಂದ ಸಮಾನ ನಾಗರೀಕ ಸಂಹಿತೆಯಿಂದ ತೊಂದರೆಯನ್ನು ಅನುಭವಿಸುವವರು ಇಲ್ಲಿನ ಹಿಂದುಳಿದ ವರ್ಗ ಮತ್ತು ದಲಿತರು. ಆರ್.ಎಸ್.ಎಸ್ ಯಾವತ್ತೂ ಕೂಡ ಸಮಾನ ನಾಗರೀಕ ಸಂಹಿತೆ ಜಾರಿಯಾಗುವುದನ್ನು ಇಷ್ಟಪಟ್ಟಿಲ್ಲ. ಆದ್ದರಿಂದ ಅದು ಜಾರಿಯಾಗುವುದು ಕನಸಿ ಮಾತಾಗಿದೆ ಎಂದರು.
ಈ ದೇಶದ ದಲಿತ ಹಾಗೂ ಮುಸ್ಲಿಮರ ಮಾನಸಿಕತೆ ಒಂದೇ ತೆರನಾಗಿದ್ದು ಬಹಿರಂಗವಾಗಿ ತಾವು ಕಾಂಗ್ರೇಸ್ ನ್ನು ಬೆಂಬಲಿಸುವುದಿಲ್ಲ ಎಂದೂ ಘೋಷಿಸಬೇಕು. ಭಾರತದ ಭವಿಷ್ಯಕ್ಕಾಗಿ ಜಾತ್ಯಾತೀತ ಆಂದೋಲನವನ್ನು ಬಲಪಡಿಸಬೇಕು ಎಂದು ಅವರು ಕರೆ ನೀಡಿದರು.
ಸಮಾರಂಭದಲ್ಲಿ ಆಶಯ ನುಡಿಯನ್ನಾಡಿದ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಧ್ಯಕ್ಷೆ ಹಿರಿಯ ಲೇಖಕಿ ಬಿ.ಟಿ.ಲಲಿತಾ ನಾಯಕ್, ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನರ ದನಿಯನ್ನು ಅಡಗಿಸು ಪ್ರಯತ್ನ ಮಾಡುತ್ತಿದ್ದು ಜನರ ಸಾಂವಿಧಾನಿಕ ಹಕ್ಕುಗಳನ್ನು ಕಸಿದುಕೊಳ್ಳುತ್ತಿವೆ. ಕಪ್ಪ ಕಾಣಿಕೆಯ ಡೈರಿಯನ್ನು ಬಿಡುಗಡೆಗೊಳಿಸುವ ನಾಟಕನ್ನಾಡುವ ಎರಡೂ ಪಕ್ಷದವರು ಕಳ್ಳರೇ ಆಗಿದ್ದು ಬಡ ಜನರ ಪಾಪದ ಹಣದಿಂದ ಗದ್ದುಗೆ ಅಲಂಕರಿಸಿದ್ದಾರೆ ಎಂದರು.
ನೋಟ್ ಬ್ಯಾನ್ ಮಾಡುವುದರ ಮೂಲಕ ಬಡವರ ಶಾಪಕ್ಕೆ ಗುರಿಯಾಗಿರುವ ಮೋದಿ ಕ್ಷಮಿಸಲು ಅನರ್ಹ ವ್ಯಕ್ತಿಯಾಗಿದ್ದಾರೆ ಎಂದು ಹರಿಹಾಯ್ದ ನಾಯಕ್, ಮುಂಬರುವ ಲೋಕಸಭಾ ಚುನಾವಣೆಗಳಲ್ಲಿ ಜನರು ಅವರನ್ನು ಏನು ಮಾಡುತ್ತಾರೆ ಎನ್ನುವುದನ್ನು ಕಾದು ನೋಡಿ ಎಂದರು. ತಿರುಪತಿ ತಿಮ್ಮಪ್ಪನಿಗೆ ಚಿನ್ನದ ಕಿರಿಟ ನೀಡುವವರು ಅನ್ನ ಆಹಾರವಿಲ್ಲದೆ ಸಾಯುತ್ತಿರುವ ಬಡ ಜನರಿಗೆ ಉಳಿಸಿಕೊಳ್ಳಿ ನಮ್ಮ ದೇಶದಲ್ಲಿ ಭ್ರಷ್ಟಚಾರ, ಜಾತಿಯತೆ ಹೆಂಡ, ಕಳ್ಳದಂಧೆಗಳು ಅವ್ಯಾಹತವಾಗಿದ್ದು ಇದರಿಂದ ದೇಶವನ್ನು ಮುಕ್ತಗೊಳಿಸುವ ಪಣತೊಡಲು ಕರೆ ನೀಡಿದರು.
ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ನಿಕಟಪೂರ್ವ ರಾಷ್ಟ್ರೀಯ ಅಧ್ಯಕ್ಷ ಮುಜ್ತಬಾ ಫಾರೂಖ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಮುಖಂಡರಾದ ಅಕ್ಬರ್ ಅಲಿ ಉಡುಪಿ, ಪ್ರಗತಿಪರ ಚಿಂತಕ ಕೆ.ಎಂ.ಕುನ್ನಿ ಅಬ್ದುಲ್ಲಾ ಮಡಿಕೇರಿ, ರಾಜ್ಯ ಪ್ರಧಾನ ಕಾರ್ಯದರ್ಶಿ ತಾಹೀರ್ ಹುಸೇನ್, ಯುವ ಘಟಕದ ರಾಜ್ಯಾಧ್ಯಕ್ಷ ತಾಜುದ್ದೀನ್ ಷರೀಫ್ ಈ ಸಂದರ್ಭದಲ್ಲಿ ಮಾತನಾಡಿದರು.
ವೇದಿಕೆಯಲ್ಲಿ ಕರ್ನಾಟಕ ತಾಂಡ ರಕ್ಷಣಾ ವೇದಿಕೆಯ ಮಹಿಳಾ ಘಟಕದ ಅಧ್ಯಕ್ಷೆ ಜಯಲಕ್ಷ್ಮಿ ಚೌಹಾಣ್, ಜೆ.ಟಿ.ಪಟ್ಟನ್ಕರ್, ನಾಗರಾಜ್ ಶೇಟ್, ಅನ್ವರ್ ಅಲಿ ಕಾಪು, ಉ.ಕ.ಜಿಲ್ಲಾಧ್ಯಕ್ಷ ಯೂನೂಸ್ ರುಕ್ನುದ್ದೀನ್, ಅಬ್ದುಲ್ ಮಜೀದ್ ಕೋಲಾ, ಝಾಹಿದ್ದ ಹುಸೇನ್, ಅಬ್ದುಲ್ ಅಝೀರ್, ಸೈಯ್ಯದ್ ಅಬ್ದುಲ್ ಕಾದಿರ್ ರಬ್ಬಾನಿ, ಸೈಯ್ಯದ್ ಅಬುಲ್ ಆಲಾ ಬರ್ಮಾವರ್ ಮತ್ತಿತರರು ಉಪಸ್ಥಿತರಿದ್ದರು.
ರಿಯಾರ್ ಆಹ್ಮದ್ ಹಾಗೂ ಖಮರುದ್ದೀನ್ ಮಷಾಯಿಕ್ ಕಾರ್ಯಕ್ರಮ ನಿರೂಪಿಸಿದರು. ಉ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೌಕತ್ ಖತೀಬ್ ಸ್ವಾಗತಿಸಿದರು.







