ಕಾರ್ಮಿಕ ಕಾಯ್ದೆ ತಿದ್ದುಪಡಿ, ಬ್ಯಾಂಕ್‌ಗಳ ವಿಲೀನ ಖಂಡಿಸಿ: ನಾಳೆ ಬ್ಯಾಂಕ್ ನೌಕರರ ಮುಷ್ಕರ

ಬೆಂಗಳೂರು, ಫೆ. 27: ಎಸ್‌ಬಿಐನೊಂದಿಗೆ ಸಹವರ್ತಿ ಬ್ಯಾಂಕುಗಳ ವಿಲೀನ, ಸುಧಾರಣೆ ನೆಪದಲ್ಲಿ ಕಾರ್ಮಿಕ ಕಾಯ್ದೆಗೆ ತಿದ್ದುಪಡಿ, ವಸೂಲಾಗದ ಸಾಲಕ್ಕೆ ಬ್ಯಾಂಕ್ ಅಧಿಕಾರಿಗಳ ಹೊಣೆ ಮಾಡುವುದನ್ನು ವಿರೋಧಿಸಿ ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬ್ಯಾಂಕ್ ನೌಕರರ ಮುಷ್ಕರಕ್ಕೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ.
ಹೀಗಾಗಿ ನಾಳೆ(ಫೆ.28)ರಾಷ್ಟ್ರೀಕೃತ ಬ್ಯಾಂಕುಗಳು ಸೇರಿ ಯಾವುದೇ ಬ್ಯಾಂಕುಗಳು ಕಾರ್ಯ ನಿರ್ವಹಿಸುವುದಿಲ್ಲ. ಮುಷ್ಕರದ ಹಿನ್ನೆಲೆಯಲ್ಲಿ ಬೆಳಗ್ಗೆ 10ಗಂಟೆಗೆ ಪುರಭವನದ ಮುಂಭಾಗದಲ್ಲಿನ ಕೆನರಾ ಬ್ಯಾಂಕ್ ಪ್ರಧಾನ ಕಚೇರಿ ಆವರಣದಲ್ಲಿ ಭಾರತೀಯ ಬ್ಯಾಂಕ್ ನೌಕರರ ಒಕ್ಕೂಟದ ನೇತೃತ್ವದಲ್ಲಿ ಮುಷ್ಕರ ಹಮ್ಮಿಕೊಳ್ಳಲಾಗಿದೆ.
ಕೇಂದ್ರ ಸರಕಾರಿ ನೌಕರರಿಗೆ ಕೊಟ್ಟಂತಹ 20ಲಕ್ಷ ರೂ.ಗ್ರಾಚ್ಯುಟಿಯನ್ನು 2016ರ ಜನವರಿ 1ರಿಂದ ಪೂರ್ವಾನ್ವಯ ಆಗುವಂತೆ ಬ್ಯಾಂಕ್ ನೌಕರರಿಗೂ ಸಿಗುವಂತೆ ಮಾಡಬೇಕು. ನಿವೃತ್ತರ ಬ್ಯಾಂಕ್ ನೌಕರರ ಪಿಂಚಣಿ ಸೌಲಭ್ಯ ಪುನರ್ ಪರಿಶೀಲನೆ ನಡೆಸಬೇಕು.
ಸೇವೆಯಲ್ಲಿದ್ದ ವೇಳೆ ವಿವಿಧ ಕಾರಣಗಳಿಂದ ಮೃತಪಟ್ಟ ನೌಕರರ ಕುಟುಂಬದ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ನೌಕರಿ ನೀಡಬೇಕು, ಬ್ಯಾಂಕುಗಳು ನಿರ್ಲಕ್ಷ ಧೋರಣೆ ತಾಳುತ್ತಿರುವ ಬ್ಯಾಂಕುಗಳ ಆಡಳಿತ ಮಂಡಳಿಯಲ್ಲಿ ಕಾರ್ಮಿಕ ವರ್ಗಕ್ಕೆ ನಿರ್ದೇಶಕ ಸ್ಥಾನ ಕಲ್ಪಿಸಬೇಕು.
ಅಲ್ಲದೆ, ಗರಿಷ್ಠ ಮೊತ್ತದ 500 ರೂ. ಮತ್ತು ಸಾವಿರ ರೂ. ಮೊತ್ತದ ನೋಟು ರದ್ದತಿ ಬಳಿಕ ಹೆಚ್ಚುವರಿ ಕಾರ್ಯ ನಿರ್ವಹಿಸುತ್ತಿರುವ ಬ್ಯಾಂಕ್ ಸಿಬ್ಬಂದಿಗೆ ವಿಶೇಷ ಭತ್ತೆ ನೀಡುವುದು ಸೇರಿದಂತೆ ನೌಕರರ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕೆಂದು ಐಎನ್‌ಬಿಇಎಫ್ ಪ್ರಧಾನ ಕಾರ್ಯದರ್ಶಿ ಎಂ.ಕೆ.ನರಸಿಂಹಮೂರ್ತಿ ಆಗ್ರಹಿಸಿದ್ದಾರೆ.
ಮುಷ್ಕರದಲ್ಲಿ ದೇಶದ ಎಲ್ಲ ಬ್ಯಾಂಕ್ ನೌಕರರು ಪಾಲ್ಗೊಳ್ಳಲಿದ್ದಾರೆ. ಆದರೆ, ಸಾಮಾನ್ಯ ಜನರಿಗೆ ತೊಂದರೆಯಾಗದಂತೆ ಎಟಿಎಂಗಳು ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದರು.
‘ಸ್ಟೇಟ್ ಬ್ಯಾಂಕ್, ಎಸ್‌ಬಿಐ, ಎಸ್‌ಬಿಎಂ, ಕಾರ್ಪೋರೇಷನ್ ಬ್ಯಾಂಕ್, ಕೆನರಾ ಬ್ಯಾಂಕ್, ಐಡಿಬಿಐ, ಪಿಎನ್‌ಬಿ, ಬ್ಯಾಂಕ್ ಆಫ್ ಬರೋಡಾ, ಕರ್ನಾಟಕ ಬ್ಯಾಂಕ್, ಅಪೆಕ್ಸ್ ಬ್ಯಾಂಕ್, ಗ್ರಾಮೀಣ ಬ್ಯಾಂಕ್, ಸಹಕಾರ ಬ್ಯಾಂಕುಗಳು ಸೇರಿದಂತೆ ಬಹುತೇಕ ಎಲ್ಲ ರಾಷ್ಟ್ರೀಕೃತ ಬ್ಯಾಂಕುಗಳ ಸಿಬ್ಬಂದಿ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ’
-ಎಂ.ಕೆ.ನರಸಿಂಹಮೂರ್ತಿಪ್ರಧಾನ ಕಾರ್ಯದರ್ಶಿ ಐಎನ್‌ಬಿಇಎಫ್







