ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡದೆ ಬಿಜೆಪಿ ದೊಡ್ಡ ತಪ್ಪು ಮಾಡಿದೆ: ಉಮಾ

ಹೊಸದಿಲ್ಲಿ,ಫೆ.27: ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ ಬಿಜೆಪಿ ದೊಡ್ಡ ತಪ್ಪು ಮಾಡಿದೆ ಎಂದು ಕೇಂದ್ರ ಸಚಿವೆ ಉಮಾ ಭಾರತಿ ಹೇಳಿದ್ದಾರೆ.
ಸಿಎನ್‌ಎನ್-ನ್ಯೂಸ್18 ಸುದ್ದಿವಾಹಿನಿ ಜೊತೆ ಸೋಮವಾರ ಮಾತನಾಡಿದ ಅವರು, ‘‘ಉತ್ತರಪ್ರದೇಶದಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಚುನಾವಣೆಗೆ ನಿಲ್ಲಿಸಲು ಸಾಧ್ಯವಾಗದಿದ್ದುದಕ್ಕಾಗಿ ನಮಗೆ ನಿಜಕ್ಕೂ ಬೇಸರವಾಗಿದೆ. ವಿಧಾನಸಭೆಗೆ ಪಕ್ಷದಿಂದ ಮುಸ್ಲಿಂ ಅಭ್ಯರ್ಥಿಯು ಹೇಗೆ ಆಯ್ಕೆಯಾಗುವಂತೆ ಮಾಡಬಹುದಿತ್ತು ಎಂಬ ಬಗ್ಗೆ ನಾನು ಪಕ್ಷಾಧ್ಯಕ್ಷ ಅಮಿತ್ ಷಾ, ಪಕ್ಷದ ಉತ್ತರಪ್ರದೇಶ ಘಟಕದ ಅಧ್ಯಕ್ಷ ಕೇಶವ್ ಪ್ರಸಾದ್ ವೌರ್ಯ ಜೊತೆ ಮಾತನಾಡಿದ್ದೇನೆ’’ ಎಂದರು.
ಈ ಬಗ್ಗೆ ಇತ್ತೀಚೆಗೆ ಕೇಂದ್ರ ಗೃಹ ಸಚಿವ ರಾಜ್‌ನಾಥ್ ಸಿಂಗ್ ನೀಡಿದ್ದ ಹೇಳಿಕೆಯನ್ನು ಪ್ರಸ್ತಾಪಿಸಿದ ಉಮಾ ಅವರು, ‘‘ ರಾಜ್‌ನಾಥ್‌ಜೀ ಸರಿಯಾದ್ದನ್ನೇ ಹೇಳಿದ್ದಾರೆ. ನಾವು ಮುಸ್ಲಿಮರಿಗೆ ಟಿಕೆಟ್ ನೀಡಬೇಕಿತ್ತು’’ ಎಂದರು.
ಆದರೆ ಉಮಾಭಾರತಿಯ ಹೇಳಿಕೆಗೆ, ಬಿಜೆಪಿಯ ಲೋಕಸಭಾ ಸದಸ್ಯ ವಿನಯ ಕಟಿಯಾರ್ ವಿರೋಧ ವ್ಯಕ್ತಪಡಿಸಿದ್ದಾರೆ. ‘‘ಮುಸ್ಲಿಮರು ನಮಗೆ ಮತ ನೀಡದಿರುವಾಗ, ಅವರಿಗೆ ನಾವ್ಯಾಕೆ ಟಿಕೆಟ್ ನೀಡಬೇಕು’’ ಎಂದವರು ಪ್ರಶ್ನಿಸಿದ್ದಾರೆ.







