ನಟಿ ಅಪಹರಣ ಪ್ರಕರಣ : ‘ಅಮ್ಮಾ’,ನಟರ ‘ನಿಗೂಢ ’ಮೌನ: ಸಿಪಿಐ ನಾಯಕ

ಕೊಚ್ಚಿ,ಫೆ.27: ಖ್ಯಾತ ನಟಿಯ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಯನ್ನು ಒಳಸಂಚು ಕೋನದಿಂದ ನಡೆಸಬೇಕು ಎಂಬ ಕೂಗುಗಳ ನಡುವೆಯೇ ಹಿರಿಯ ಸಿಪಿಐ ನಾಯಕ ಹಾಗೂ ಮಾಜಿ ಸಚಿವ ಬಿನೋಯ್ ವಿಶ್ವಂ ಅವರು, ಅಸೋಸಿಯೇಷನ್ ಆಫ್ ಮಲಯಾಳಂ ಮೂವಿ ಆರ್ಟಿಸ್ಟ್ಸ್(ಅಮ್ಮಾ) ಮತ್ತು ಖ್ಯಾತ ಮಲಯಾಳಂ ನಟರ ಮೌನ ‘ನಿಗೂಢ ’ವಾಗಿದೆ ಎಂದು ಸೋಮವಾರ ಇಲ್ಲಿ ಬಣ್ಣಿಸಿದರು.
ಘಟನೆಯ ಹಿಂದೆ ಯಾವುದೇ ಒಳಸಂಚು ಇಲ್ಲವೆಂದು ತಾನು ಹೇಳಿಲ್ಲ ಎಂದು ಸ್ಪಷ್ಟಪಡಿಸಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ರವಿವಾರ ನೀಡಿರುವ ಹೇಳಿಕೆಯನ್ನು ಸ್ವಾಗತಿಸಿದ ವಿಶ್ವಂ, ಈ ಘಟನೆಯ ಹಿಂದಿನ ನಿಜವಾದ ತಪ್ಪಿತಸ್ಥರನ್ನು ಪತ್ತೆ ಹಚ್ಚಲು ಅರ್ಥಪೂರ್ಣ ತನಿಖೆ ನಡೆಯಬೇಕು ಎಂದು ಹೇಳಿದರು.
ಪೃಥ್ವಿರಾಜ್, ಮಂಜು ವಾರಿಯರ್ ಮತ್ತು ಇತರ ಕೆಲವು ಕಲಾವಿದರನ್ನು ಹೊರತು ಪಡಿಸಿದರೆ ಚಿತ್ರರಂಗದ ಒಬ್ಬನೇ ಒಬ್ಬ ವ್ಯಕ್ತಿ ಘಟನೆಯ ಕುರಿತು ಒಳಸಂಚು ಕೋನದಿಂದ ತನಿಖೆ ನಡೆಯಬೇಕು ಎಂದು ಹೇಳಿಲ್ಲ. ಇದು ನಿಗೂಢತೆಯನ್ನು ಮೂಡಿಸಿದೆ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು ನುಡಿದರು.
‘ಪ್ರಬಲ ಶಕ್ತಿಗಳ ’ಬೆಂಬಲವಿಲ್ಲದೆ ಓರ್ವ ಚಾಲಕ ಮತ್ತು ಆತನ ಸಹಚರ ಖ್ಯಾತ ನಟಿಯ ವಿರುದ್ಧ ಇಂತಹ ಹೇಯ ಅಪರಾಧವೆಸಗಲು ಧೈರ್ಯ ಮಾಡಲು ಸಾಧ್ಯವಿಲ್ಲ ಎಂದ ಅವರು, ಬಾಲಿವುಡ್ ಭೂಗತ ಜಗತ್ತು ಮತ್ತು ಮಾಫಿಯಾದಿಂದ ಹೆಚ್ಚು ಪ್ರಭಾವಿತವಾಗಿದೆ. ಅಂತಹ ಸ್ಥಿತಿ ಮಲಯಾಳಂ ಚಿತ್ರರಂಗಕ್ಕೆ ಬರಕೂಡದು ಎಂದರು.
ಘಟನೆಯ ಬಳಿಕ ಅಸಾಧಾರಣ ಧೈರ್ಯವನ್ನು ಪ್ರದರ್ಶಿಸಿದ್ದಕ್ಕಾಗಿ ನಟಿಯನ್ನು ಪ್ರಶಂಸಿಸಿದ ಅವರು, ಘಟನೆಗೆ ಆಕೆ ಪ್ರತಿಕ್ರಿಯಿಸಿದ ರೀತಿಯು ಸಮಾಜದಲ್ಲಿ ತಮ್ಮ ಹಕ್ಕುಗಳು ಮತ್ತು ಸ್ಥಾನದ ಅರಿವಿರುವ ಒಂದು ವರ್ಗದ ಕೇರಳ ಮಹಿಳೆಯರ ಸದ್ಯದ ಮನೋಸ್ಥಿತಿಯನ್ನು ಒತ್ತಿ ಹೇಳಿದೆ ಎಂದರು.







