ಆಸ್ಕರ್‌ನಲ್ಲಿ ಯಡವಟ್ಟಿಗೆ ಅಚ್ಚರಿ ವ್ಯಕ್ತಪಡಿಸಿದ ಬಾಲಿವುಡ್

ಮುಂಬೈ,ಫೆ.27: ರವಿವಾರ ರಾತ್ರಿ ಅಮೆರಿಕದ ಲಾಸ್ ಏಂಜಲಿಸ್‌ನಲ್ಲಿ 89ನೆ ಅಕಾಡಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತ್ಯುತ್ತಮ ಚಿತ್ರವನ್ನು ಘೋಷಿಸಿದ ಸಂದರ್ಭ ಉಂಟಾಗಿದ್ದ ವಿಲಕ್ಷಣ ಯಡವಟ್ಟಿಗೆ ಬಾಲಿವುಡ್ ಆಘಾತ ವ್ಯಕ್ತಪಡಿಸಿದೆ. ಇದು ಆಸ್ಕರ್ ಇತಿಹಾಸದಲ್ಲಿ ವಿಲಕ್ಷಣ ಭಾವೋನ್ಮಾದದ ಗೊಂದಲವಾಗಿದೆ ಎಂದು ಶಬಾನಾ ಆಝ್ಮಿ, ಕರಣ ಜೋಹರ್ ಸೇರಿದಂತೆ ಬಾಲಿವುಡ್ ಗಣ್ಯರು ಹೇಳಿದ್ದಾರೆ.
‘ಮೂನ್ ಲೈಟ್ ’ ಅತ್ಯುತ್ತಮ ಚಿತ್ರವೆಂದು ಆಸ್ಕರ್ ಪ್ರಶಸ್ತಿಗೆ ಆಯ್ಕೆಯಾಗಿತ್ತಾದರೂ ಕಾರ್ಯಕ್ರಮದ ನಿರೂಪಕರಾಗಿದ್ದ ವಾರೆನ್ ಬೀಟ್ಟಿ ಮತ್ತು ಫಾಯೆ ಡನ್‌ವೇ ಅವರು ಅತ್ಯುತ್ತಮ ನಿರ್ದೇಶಕ ಮತ್ತು ಅತ್ಯುತ್ತಮ ನಟಿ ಸೇರಿದಂತೆ ಆರು ಟ್ರೋಫಿಗಳನ್ನು ಬಾಚಿಕೊಂಡ ‘ಲಾ ಲಾ ಲ್ಯಾಂಡ್ ’ಅನ್ನು ಅತ್ಯುತ್ತಮ ಚಿತ್ರವೆಂದು ತಪ್ಪಾಗಿ ಘೋಷಿಸಿದ್ದರು.
ಚಿತ್ರದ ಗೆಲುವಿನ ಕುರಿತು ಅವರ ಮಾತುಗಳು ಮುಂದುವರಿದಿದ್ದು, ಒಂದು ಹಂತದಲ್ಲಿ ‘ಲಾ ಲಾ ಲ್ಯಾಂಡ್ ’ನ ನಿರ್ಮಾಪಕರಲ್ಲೊಬ್ಬರಾದ ಜೋರ್ಡನ್ ಹೊರೊವಿಝ್ ಅವರಿಗೆ ಈ ತಪ್ಪು ಗಮನಕ್ಕೆ ಬಂದಿತ್ತು ಮತ್ತು ಅತ್ಯುತ್ತಮ ಚಿತ್ರ ಪ್ರಶಸ್ತಿ ವಾಸ್ತವದಲ್ಲಿ ‘ಮೂನ್ ಲೈಟ್ ’ಚಿತ್ರಕ್ಕೆ ಒಲಿದಿದೆ ಎಂದು ಅವರು ಪ್ರಕಟಿಸಿದ್ದರು.
ಈ ವಿಲಕ್ಷಣ ಯಡವಟ್ಟಿನ ಬೆನ್ನ ಹಿಂದೆಯೇ ಬಾಲಿವುಡ್ ಗಣ್ಯರು ಟ್ವಿಟರ್‌ನಲ್ಲಿ ವ್ಯಂಗ್ಯಭರಿತ ಮತ್ತು ಹಾಸ್ಯಲೇಪಿತ ಟೀಕಾಸ್ತ್ರಗಳನ್ನು ಪ್ರಯೋಗಿಸಿದ್ದಾರೆ.
ಆಸ್ಕರ್‌ನಲ್ಲಿ ನಡೆದಿರುವುದನ್ನು ನಂಬಲು ನನಗೆ ಸಾಧ್ಯವಾಗುತ್ತಿಲ್ಲ ಎಂದು ಹಿರಿಯ ನಟಿ ಶಬಾನಾ ಆಝ್ಮಿ ಟ್ವೀಟಿಸಿದರೆ, ಇದು ಅಕಾಡಮಿ ಪ್ರಶಸ್ತಿ ಪ್ರದಾನದ ಇತಿಹಾಸದಲ್ಲಿ ಅತ್ಯಂತ ಹಾಸ್ಯಾಸ್ಪದ ಮತ್ತು ಉನ್ಮತ್ತ ಯಡವಟ್ಟು ಆಗಿದೆ ಎಂದು ಕರಣ್ ಜೋಹರ್ ಪೋಸ್ಟ್ ಮಾಡಿದ್ದಾರೆ.
ಸೋನು ಸೂದ್,ಫರ್ಹಾ ಖಾನ್ ಮುಂತಾದವರೂ ಟ್ವಿಟರಾಸ್ತ್ರ ಪ್ರಯೋಗದಲ್ಲಿ ಹಿಂದೆ ಬಿದ್ದಿಲ್ಲ.