ಉಡುಪಿ: ಅಕ್ರಮ ದಾಸ್ತಾನು; 57 ಗ್ಯಾಸ್ ಸಿಲಿಂಡರ್ ವಶ

ಉಡುಪಿ, ಫೆ.27: ಹಿರಿಯಡ್ಕದ ನಾಲ್ಕು ಮನೆಗಳಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಲಾಗಿದ್ದ ಒಟ್ಟು 57 ಗ್ಯಾಸ್ ಸಿಲಿಂಡರ್‌ಗಳನ್ನು ಅಧಿಕಾರಿಗಳ ತಂಡ ಇಂದು ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದೆ.
ಹಿರಿಯಡ್ಕದ ರಘುಪತಿ ಉಡುಪ, ನಾಗರಾಜ್ ಭಟ್, ದೇವದಾಸ ಮರಾಠೆ ಹಾಗೂ ಶ್ರೀನಿವಾಸ ರಾವ್ ಎಂಬವರ ಮನೆಯಲ್ಲಿ ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ದಾಸ್ತಾನು ಇರಿಸಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಯಂತೆ ಉಡುಪಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪ ನಿರ್ದೇಶಕ ಯೋಗೇಶ್ವರ್ ಮಾರ್ಗದರ್ಶನದಲ್ಲಿ ಉಡುಪಿ ತಹಶೀಲ್ದಾರ್ ಮಹೇಶ್ಚಂದ್ರ ನೇತೃತ್ವದ ತಂಡ ದಾಳಿ ನಡೆಸಿದೆ.
ಇವರ ಮನೆಗಳಲ್ಲಿ ಪತ್ತೆಯಾಗಿರುವ ಎಚ್‌ಪಿ ಕಂಪೆನಿಯ ಒಟ್ಟು 57 ಗ್ಯಾಸ್ ಸಿಲಿಂಡರ್‌ಗಳಲ್ಲಿ 18 ದೊಡ್ಡ ಹಾಗೂ ಒಂದು ಸಣ್ಣ ಗಾತ್ರದ ಗ್ಯಾಸ್ ತುಂಬಿದ ಸಿಲಿಂಡರ್‌ಗಳು ಮತ್ತು 38 ಖಾಲಿ ಗ್ಯಾಸ್ ಸಿಲಿಂಡರ್ ಆಗಿದೆ. ಇವುಗಳಲ್ಲಿ 22 ಮನೆ ಬಳಕೆ ಹಾಗೂ 35 ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್‌ಗಳಾಗಿವೆ. ಇವುಗಳನ್ನು ವಶಪಡಿಸಿಕೊಂಡಿರುವ ತಂಡ ಅದನ್ನು ಹಿರಿಯಡ್ಕ ಪೊಲೀಸ್ ಠಾಣೆಗೆ ಹಸ್ತಾಂತರಿಸಿದೆ. ಈ ಬಗ್ಗೆ ಆರೋಪಿಗಳ ವಿರುದ್ಧ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಪಾಯಕಾರಿ ಅಕ್ರಮ ಗ್ಯಾಸ್ ಸಿಲಿಂಡರ್ ದಾಸ್ತಾನು ವಿರುದ್ಧ ಕ್ರಮ ಜರಗಿಸುವಂತೆ ಸ್ಥಳೀಯರು ಕಳೆದ ವರ್ಷ ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ದ್ದರು. ಇದಕ್ಕೂ ಮುನ್ನ ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿ ಎಚ್ಚರಿಕೆ ಕೂಡ ನೀಡಿದ್ದರು.
ಆದರೂ ಈ ದಂಧೆ ಮುಂದುವರೆದಿತ್ತು. ರಘುಪತಿ ಉಡುಪರ ಮನೆಯ ಬಳಿ ನಿಲ್ಲಿಸಲಾದ ಇಂಜಿನ್ ಇಲ್ಲದ ಹಳೆಯ ರಿಕ್ಷಾದಲ್ಲಿ ಈ ಅಕ್ರಮ ದಾಸ್ತಾನು ಕಾರ್ಯಾಚರಿಸುತ್ತಿದ್ದವು.







