ವಿಶ್ವಾಸಮತ ಯಾಚನೆಯ ವೀಡಿಯೋ ದಾಖಲೆ ಒದಗಿಸಲು ಹೈಕೋರ್ಟ್ ಆದೇಶ
ಚೆನ್ನೈ, ಫೆ.27: ಹತ್ತು ದಿನಗಳ ಹಿಂದೆ ತಮಿಳುನಾಡು ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ನಡೆದ ಮುಖ್ಯ ಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ವಿಶ್ವಾಸ ಮತ ಯಾಚನೆ ಕಲಾಪದ ವೀಡಿಯೊ ದಾಖಲೆಯನ್ನು ಒದಗಿಸುವಂತೆ ಮದ್ರಾಸ್ ಹೈಕೋರ್ಟ್ ಇಂದು ಆದೇಶ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಹುಲುವಾಡಿ ಜಿ.ರಮೇಶ್ ಮತ್ತು ನ್ಯಾಯಮೂರ್ತಿ ಆರ್.ಜಯದೇವನ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಸ್ವೀಕರ್‌ಗೆ ನೋಟಿಸ್ ಜಾರಿ ಮಾಡಿದೆ.
ವಿಶ್ವಾಸ ಮತ ಯಾಚನೆಯ ಕಲಾಪದ ಆರಂಭದಿಂದ ಅಂತ್ಯದ ತನಕ ವಿಧಾನಸಭೆಯಲ್ಲಿ ಸಂಭವಿಸಿರುವ ಘಟನೆಗಳಿಗೆ ಸಂಬಂಧಿಸಿ ಸಮಗ್ರ ದಾಖಲೆ ಇರುವ ವೀಡಿಯೊವನ್ನು ಒದಗಿಸುವಂತೆ ವಿಧಾನಸಭೆಯ ಕಾರ್ಯದರ್ಶಿಗೆ ಹೈಕೋರ್ಟ್ ನಿರ್ದೇಶನ ನೀಡಿದ್ದು, ಪ್ರಕರಣದ ವಿಚಾರಣೆಯನ್ನು ಮಾರ್ಚ್ 10ಕ್ಕೆ ಮುಂದೂಡಿದೆ.
ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ.ಸ್ಟಾಲಿನ್, ಸಾಮಾಜಿಕ ನ್ಯಾಯ ಪರ ಹೋರಾಟ ನಡೆಸುತ್ತಿರುವ ವಕೀಲರ ವೇದಿಕೆಯ ಅಧ್ಯಕ್ಷ ಕೆ.ಬಾಲು, ಸಾಮಾಜಿಕ ಕಾರ್ಯಕರ್ತ ಟ್ರಾಫಿಕ್ ರಂಗಸ್ವಾಮಿ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಫೆ.18 ರಂದು ನಡೆದಿರುವ ವಿಶ್ವಾಸಮತ ಯಾಚನೆ ಪ್ರಕ್ರಿಯೆಯು ಅಕ್ರಮ ಮತ್ತು ಅನೂರ್ಜಿತವಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.
ನ್ಯಾಯಪೀಠವು ಸ್ಟಾಲಿನ್ ಅವರ ವಕೀಲ ಷಣ್ಮುಖ ಸುಂದರಮ್ ಅವರಿಗೆ ವಿಶ್ವಾಸ ಮತ ಯಾಚನೆಗೆ ಸಂಬಂಧಿಸಿದ ವೀಡಿಯೋ ದಾಖಲೆ ಒದಗಿಸುವಂತೆ ಸೂಚಿಸಿತ್ತು. ವಿಧಾನಸಭೆಯಲ್ಲಿ ವಿಪಕ್ಷ ನಾಯಕರಾಗಿರುವ ಸ್ಟಾಲಿನ್ ಅವರಿಗೆ ಸಾರ್ವಜನಿಕವಾಗಿ ಲಭ್ಯವಿರುವ ದಾಖಲೆಯನ್ನು ಎವಿಡೆನ್ಸ್ ಆ್ಯಕ್ಟ್ ಸೆಕ್ಷನ್ 65ರಂತೆ ಸಂಬಂಧಿಸಿದ ಅಧಿಕಾರಿ ಪ್ರಮಾಣಿಕರಿಸದ ಕಾರಣದಿಂದಾಗಿ ಒದಗಿಸಲು ಸಾಧ್ಯವಾಗಲಿಲ್ಲ. ವೀಡಿಯೋ ದಾಖಲೆಯ ತುಣುಕುಗಳನ್ನು ಒದಗಿಸುವಂತೆ ವಿಧಾನಸಭೆಯ ಕಾರ್ಯದರ್ಶಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.