ದೇಶದ್ರೋಹ ಪ್ರಕರಣದಲ್ಲಿ ಸಿಮಿ ಮುಖ್ಯಸ್ಥ ಸೇರಿದಂತೆ 11 ಜನರಿಗೆ ಜೀವಾವಧಿ ಶಿಕ್ಷೆ

ಇಂದೋರ,ಫೆ.27: ಇಲ್ಲಿಯ ವಿಶೇಷ ನ್ಯಾಯಾಲಯವು 2008ರ ದೇಶದ್ರೋಹ ಪ್ರಕರಣದಲ್ಲಿ ಸಿಮಿ ಮುಖ್ಯಸ್ಥ ಸಫ್ದರ್ ಹುಸೇನ್ ನಾಗೋರಿ ಮತ್ತು ನಿಷೇಧಿತ ಸಂಘಟನೆಯ ಇತರ 10 ಕಾರ್ಯಕರ್ತರಿಗೆ ಸೋಮವಾರ ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಿದೆ.
ಅಹ್ಮದಾಬಾದ್‌ನ ಸಾಬರಮತಿ ಕೇಂದ್ರ ಕಾರಾಗೃಹದಲ್ಲಿರುವ 10 ಆರೋಪಿಗಳು ತೀರ್ಪು ಪ್ರಕಟಣೆಯ ದಿನ ತಮ್ಮನ್ನು ಇಂದೋರಗೆ ಕರೆತರಬಾರದು ಮತ್ತು ವೀಡಿಯೊ ಕಾನ್‌ಫರೆನ್ಸ್ ಸೌಲಭ್ಯದ ಮೂಲಕ ತಮಗೆ ನ್ಯಾಯಾಲಯದ ಆದೇಶದ ಮಾಹಿತಿಯನ್ನು ನೀಡಬೇಕು ಎಂದು ಹಿಂದಿನ ವಿಚಾರಣೆಯ ಸಂದರ್ಭ ಮಾಡಿಕೊಂಡಿದ್ದ ಮನವಿಯನ್ನು ನ್ಯಾಯಾಲಯವು ಒಪ್ಪಿಕೊಂಡಿತ್ತು. ಅದರಂತೆ ಇಂದು ತೀರ್ಪಿನ ಕುರಿತು ಅವರಿಗೆ ವೀಡಿಯೊ ಕಾನ್‌ಫರೆನ್ಸ್ ಮೂಲಕ ತಿಳಿಸಲಾಯಿತು. ಎಲ್ಲ ಹನ್ನೊಂದೂ ಸಿಮಿ ಕಾರ್ಯಕರ್ತರು ಐಪಿಸಿ ಮತ್ತು ಅಕ್ರಮ ಚಟುವಟಿಕೆಗಳ (ತಡೆ) ಕಾಯ್ದೆಯಡಿ ಅಪರಾಧಿಗಳಾಗಿದ್ದಾರೆ ಎಂದು ವಿಶೇಷ ಹೆಚ್ಚುವರಿ ಸತ್ರ ನ್ಯಾಯಧೀಶ ಬಿ.ಕೆ.ಪಲೋಡಾ ಘೋಷಿಸಿದರು.
ನಾಗೋರಿ(45) ಜೊತೆಗೆ ಹಫೀಝ್ ಹುಸೈನ್(35), ಆಮಿಲ್ ಪರ್ವೇಝ್(40), ಶಿವ್ಲಿ(38), ಕಮರುದ್ದೀನ್(42), ಶಾಹ್ದುಲಿ(32), ಕಮ್ರಾನ್(40), ಅನ್ಸಾರ್(35), ಅಹ್ಮದ್ ಬೇಗ್(32), ಯಾಸಿನ್(35) ಮತ್ತು ಮುನ್ರೋಝ್(40) ಇತರ ದೋಷಿಗಳಾಗಿದ್ದಾರೆ.
ಈ ಪೈಕಿ ಮುನ್ರೋಝ್ ಸುದೀರ್ಘ ಅವಧಿಯಿಂದ ಜಾಮೀನು ಪಡೆದುಕೊಂಡು ಹೊರಗಿದ್ದ. ಸೋಮವಾರ ತೀರ್ಪು ಪ್ರಕಟಣೆ ವೇಳೆ ನ್ಯಾಯಾಲಯದಲ್ಲಿ ಹಾಜರಿದ್ದ ಆತನನ್ನು ನ್ಯಾಯಾಲಯದಿಂದ ಇಂದೋರ ಕೇಂದ್ರ ಕಾರಾಗೃಹಕ್ಕೆ ರವಾನಿಸಲಾಯಿತು.
11 ಸಿಮಿ ಕಾರ್ಯಕರ್ತರನ್ನು 2008,ಮೇ 26ರಂದು ಇಂದೋರನಲ್ಲಿ ಬಂಧಿಸಿ, ಅವರ ಬಳಿಯಿಂದ ಪಿಸ್ತೂಲುಗಳು, ಗುಂಡುಗಳು, ಆಕೇಪಾರ್ಹ ಸಾಹಿತ್ಯ ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಅವರು ನೀಡಿದ್ದ ಮಾಹಿತಿಯಂತೆ ಬಳಿಕ ಭಾರೀ ಪ್ರಮಾಣದಲ್ಲಿ ಸ್ಫೋಟಕ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿತ್ತು.







