ಇಂದು ಶಿವಮೊಗ್ಗ ಮನಪಾ ಚುನಾವಣೆ
25ಕ್ಕೆ ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಸಂಖ್ಯೆ?

ಕುತೂಹಲ ಕೆರಳಿಸಿದ ಮೇಯರ್, ಉಪಮೇಯರ್
ಸ್ಥಾಯಿ ಸಮಿತಿ ಚುನಾವಣೆ
ಶಿವಮೊಗ್ಗ, ಫೆ.27: ಶಿವಮೊಗ್ಗ ಮಹಾನಗರ ಪಾಲಿಕೆಯ ನಾಲ್ಕನೇ ಹಂತದ ಮೇಯರ್, ಉಪ ಮೇಯರ್ ಹಾಗೂ ನಾಲ್ಕು ಸ್ಥಾಯಿ ಸಮಿತಿಗಳ ಅಧ್ಯಕ್ಷರ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ನಿರೀಕ್ಷಿಸಿದಂತೆ ಜೆಡಿಎಸ್-ಬಿಜೆಪಿ ಮೈತ್ರಿಕೂಟ ಅಧಿಕಾರದ ಗದ್ದುಗೆಯೇರುವುದು ಖಚಿತ ಎನ್ನಲಾಗುತ್ತಿದೆ. ಈ ಹಿಂದಿನ ಚುನಾವಣೆಗಳಲ್ಲಿ ನಡೆದಂತೆ, ಈ ಬಾರಿಯ ಚುನಾವಣೆಯಲ್ಲಿ ಅಂತಿಮ ಕ್ಷಣದ ಹೈಡ್ರಾಮಾ ನಡೆಯುವ ಸಾಧ್ಯತೆ ಬಹುತೇಕ ಕಡಿಮೆಯಾಗಿದೆ.
ಜೆಡಿಎಸ್ ಮನವೊಲಿಕೆಗೆ ಕಾಂಗ್ರೆಸ್ ನಡೆಸಿದ ಎಲ್ಲ ಪ್ರಯತ್ನಗಳು ವಿಫಲವಾಗಿವೆ. ಈ ಹಿನ್ನೆಲೆಯಲ್ಲಿ ಅಧಿಕಾರದ ಗದ್ದುಗೆಯೇರಲು ಕಾಂಗ್ರೆಸ್ ನಡೆಸುತ್ತಿದ್ದ ಪ್ರಯತ್ನಗಳನ್ನು ಸ್ಥಗಿತಗೊಳಿಸಿದೆ ಎಂದು ತಿಳಿದು ಬಂದಿದೆ. ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತವಿಲ್ಲದಿರುವುದರಿಂದ ಮೈತ್ರಿ ಆಳ್ವಿಕೆಗೆ ಪಾಲಿಕೆ ಆಡಳಿತ ಸಾಕ್ಷಿಯಾಗಲಿದೆ. ಮೇಯರ್-ಉಪ ಮೇಯರ್ ಚುನಾವಣೆಯಲ್ಲಿ ಸಂಸದರು, ನಗರ ವ್ಯಾಪ್ತಿಯ ಶಾಸಕರು, ವಿಧಾನ ಪರಿಷತ್ ಸದಸ್ಯರಿಗೂ ಮತದಾನ ಮಾಡುವ ಹಕ್ಕಿದೆ. ಒಟ್ಟಾರೆ 41 ಸದಸ್ಯರಿಗೆ ಮತದಾನದ ಹಕ್ಕು ಹೊಂದಿದ್ದಾರೆ.
ಅಧಿಕಾರದ ಗದ್ದುಗೆಯೇರಲು 21 ಸದಸ್ಯರ ಬಹುಮತ ಬೇಕಾಗುತ್ತದೆ. ಪ್ರಸ್ತುತ ಕಾಂಗ್ರೆಸ್‌ನಲ್ಲಿ 12 ಸದಸ್ಯರಿದ್ದು, ತಲಾ ಓರ್ವ ಶಾಸಕ - ವಿಧಾನಪರಿಷತ್ ಸದಸ್ಯರಿದ್ದಾರೆ. ಆದರೆ ಶಾಸಕ ಪ್ರಸನ್ನಕುಮಾರ್ ಪಾಲಿಕೆಯ ಸದಸ್ಯರೂ ಆಗಿರುವುದರಿಂದ ಒಂದೇ ಮತದ ಪರಿಗಣನೆ ಬರಲಿದ್ದು, ಆ ಪಕ್ಷದ ಬಲ 13 ಆಗಲಿದೆ. ಉಳಿದಂತೆ ಬಿಜೆಪಿಯಲ್ಲಿ 11 ಸದಸ್ಯರಿದ್ದಾರೆ.
ಓರ್ವ ಸಂಸದ, ಮೂವರು ವಿಧಾನಪರಿಷತ್ ಸದಸ್ಯರಿದ್ದಾರೆ. ಒಟ್ಟಾರೆ ಆ ಪಕ್ಷದ ಬಲ 15 ಆಗಲಿದೆ. ಜೆಡಿಎಸ್‌ನಲ್ಲಿ 5 ಸದಸ್ಯರಿದ್ದು, ಓರ್ವ ಶಾಸಕರಿದ್ದು ಆ ಪಕ್ಷದ ಬಲಾಬಲ ಆರು ಆಗಲಿದೆ. ಉಳಿದಂತೆ ಇತರ ಸದಸ್ಯರು ಏಳು ಜನರಿದ್ದಾರೆ. ಇದರಲ್ಲಿ ಇತ್ತೀಚೆಗೆ ಸದಸ್ಯ ನರಸಿಂಹಮೂರ್ತಿ ಜೆಡಿಎಸ್‌ಗೆ ಸೇರ್ಪಡೆಯಾಗಿದ್ದು, ಆ ಪಕ್ಷದ ಬಲ ಏಳಕ್ಕೇರಿದೆ. ಇತರ ಮೂವರು ಸದಸ್ಯರು ಕಾಂಗ್ರೆಸ್-ಜೆಡಿಎಸ್ ಬೆಂಬಲಕ್ಕೆ ನಿಂತುಕೊಂಡಿದ್ದರು. ಪ್ರಸ್ತುತ ಬಾರಿ ಈ ಸದಸ್ಯರು ಜೆಡಿಎಸ್-ಬಿಜೆಪಿ ಪರವಾಗಿ ಮತಚಲಾಯಿಸಲಿದ್ದಾರೆ ಎನ್ನಲಾಗಿದ್ದು, ಈ ಬೆಳವಣಿಗೆಯಿಂದಾಗಿ ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಸದಸ್ಯರ ಸಂಖ್ಯೆ 25 ಆಗಲಿದೆ!.
ಕಳೆದೆರೆಡು ದಿನಗಳಿಂದ ಗುಪ್ತ ಸ್ಥಳದಲ್ಲಿ ಬೀಡುಬಿಟ್ಟಿದ್ದ ಜೆಡಿಎಸ್ ಹಾಗೂ ಕೆಲ ಪಕ್ಷೇತರ ಸದಸ್ಯರು ಸೋಮವಾರ ನಗರಕ್ಕೆ ಆಗಮಿಸಿ, ಗುಪ್ತ ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ. ಈ ಎಲ್ಲ ಸದಸ್ಯರು ಮಂಗಳವಾರ ನೇರವಾಗಿ ಮಹಾನಗರ ಪಾಲಿಕೆ ಕಚೇರಿಗೆ ಆಗಮಿಸಲಿದ್ದಾರೆ ಎಂದು ತಿಳಿದು ಬಂದಿದೆ. ಕೊಟ್ಟ ಮಾತಿನಂತೆ ಮೇಯರ್ ಹುದ್ದೆಗೆ ಬೆಂಬಲ ವ್ಯಕ್ತಪಡಿಸದ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡಿದ್ದ ಜೆಡಿಎಸ್, ಕಾಂಗ್ರೆಸ್‌ನೊಂದಿಗೆ ಮಾಡಿಕೊಂಡಿದ್ದ ಮೈತ್ರಿಯನ್ನು ಮುರಿದು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಈ ನಡುವೆ ‘ಕುದುರೆ ವ್ಯಾಪಾರ’ದ ಮಾತುಗಳು ಕೂಡ ಕೇಳಿಬರಲಾರಂಭಿಸಿದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಜೆಡಿಎಸ್ ತನ್ನ ಸದಸ್ಯರು ಸೇರಿದಂತೆ ಇತರ ಮೂವರು ಸದಸ್ಯರನ್ನು ಗುಪ್ತ ಸ್ಥಳಕ್ಕೆ ರವಾನಿಸಿತ್ತು.
ಜೆಡಿಎಸ್-ಬಿಜೆಪಿ ಅಪವಿತ್ರ ಮೈತ್ರಿ: ಕಾಂಗ್ರೆಸ್ ಟೀಕೆ
ಶಿವಮೊಗ್ಗ: ಮಹಾನಗರ ಪಾಲಿಕೆ ಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಮಾಡಿಕೊಂಡಿರುವುದರಿಂದ ಕಾಂಗ್ರೆಸ್‌ಗೆ ಯಾವುದೇ ನಷ್ಟವಿಲ್ಲ. ಇದರ ಪರಿಣಾಮವನ್ನು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಎರಡೂ ಪಕ್ಷಗಳು ಅನುಭವಿಸಲಿವೆೆ ಎಂದು ಪಾಲಿಕೆಯ ಕಾಂಗ್ರೆಸ್ ದಸ್ಯ ಎಚ್.ಸಿ. ಯೋಗೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಪ್ಪಂದ ದಂತೆ ಜೆಡಿಎಸ್ ಪಕ್ಷಕ್ಕೆ ಮೇಯರ್ ಹುದ್ದೆ ಬಿಟ್ಟು ಕೊಡಲು ಕಾಂಗ್ರೆಸ್ ನಿರ್ಧರಿಸಿತ್ತು. ಈ ನಿಟ್ಟಿನಲ್ಲಿ ಜೆಡಿಎಸ್ ಪಕ್ಷದ ಮುಖಂಡ ಎಂ.ಶ್ರೀಕಾಂತ್ ಅವರೊಂದಿಗೆ ಪಕ್ಷದ ಮುಖಂಡರು ಮಾತುಕತೆಯನ್ನೂ ನಡೆಸಿದ್ದರು ಎಂದು ಮಾಹಿತಿ ನೀಡಿದ್ದಾರೆ. ಆದರೆ, ಜೆಡಿಎಸ್ ಪಕ್ಷವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿರುವುದು ಸಾಕಷ್ಟು ಅಚ್ಚರಿ ಉಂಟು ಮಾಡಿದ್ದು, ಕಾರಣ ತಿಳಿಯದಾಗಿದೆ. ಮೇಯರ್ ಹುದ್ದೆ ಬಿಟ್ಟು ಕೊಡಲು ಕಾಂಗ್ರೆಸ್ ಮೀನಮೇಷ ಎಣಿಸಿಲ್ಲ. ಜೆಡಿಎಸ್ ಮುಖಂಡರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದವರು ಆರೋಪಿಸಿದ್ದಾರೆ.
ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನದಲ್ಲಿ ಕೂರಲು ಸಿದ್ಧವಿದೆ. ಮಂಗಳ ವಾರ ನಡೆಯಲಿರುವ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿ ಲಕ್ಷ್ಮಣ್ ಅವರು ಉಮೇದುವಾರಿಕೆ ಸಲ್ಲಿಸಲಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಯೋಗೇಶ್ ಸ್ಪಷ್ಟಪಡಿಸಿದರು.
ಜೆಡಿಎಸ್‌ನಿಂದ ಹೊಸ ಇತಿಹಾಸಕ್ಕೆ ನಾಂದಿ: ಶ್ರೀಕಾಂತ್
ಶಿವಮೊಗ್ಗ, ಫೆ.27: ಪಕ್ಷದ ಸದಸ್ಯ ಕೇಬಲ್ ಬಾಬು ಅವರು ಶಿವಮೊಗ್ಗ ಮಹಾನಗರ ಪಾಲಿಕೆಯ ಮೇಯರ್ ಆಗುವುದು ನಿಶ್ಚಿತವಾಗಿದ್ದು, ಪ್ರಪ್ರಥಮ ಬಾರಿಗೆ ಮೇಯರ್ ಹುದ್ದೆ ಗಳಿಸುವ ಮೂಲಕ ಜೆಡಿಎಸ್ ಹೊಸ ಇತಿಹಾಸಕ್ಕೆ ನಾಂದಿ ಹಾಡಲಿದೆ ಎಂದು ಜೆಡಿಎಸ್‌ನ ಹಿರಿಯ ಮುಖಂಡ ಎಂ.ಶ್ರೀಕಾಂತ್ ಭವಿಷ್ಯ ನುಡಿದಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್‌ನ ಅಭಿಯಾನ ಇಲ್ಲಿಗೆ ಸೀಮಿತಗೊಳ್ಳುವುದಿಲ್ಲ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿಯೂ ಮುಂದುವರಿಯಲಿದೆ. ಶಿವಮೊಗ್ಗ ನಗರ ಕ್ಷೇತ್ರ ಸೇರಿದಂತೆ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಜಯ ಸಾಧಿಸಲಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ. ಮೂರು ಪಕ್ಷದ ಬೆಂಬಲದೊಂದಿಗೆ ಮೇಯರ್ ಸ್ಥಾನ ಗಿಟ್ಟಿಸಿಕೊಂಡಿದ್ದ ಕಾಂಗ್ರೆಸ್, ನಾಲ್ಕನೆ ಬಾರಿ ಮೇಯರ್ ಸ್ಥಾನವನ್ನು ಜೆಡಿಎಸ್ಗೆ ಬಿಟ್ಟು ಕೊಡಲು ಹಿಂದೇಟು ಹಾಕಿತು. ಇದರಿಂದ ಕಾಂಗ್ರೆಸ್‌ನೊಂದಿಗೆ ಮಾಡಿಕೊಂಡಿದ್ದ ಮೈತ್ರಿಯನ್ನು ರದ್ದು ಪಡಿಸುವ ನಿರ್ಧಾರ ಅನಿವಾರ್ಯವಾಯಿತು ಎಂದರು. ಜೆಡಿಎಸ್‌ಗೆ ಬಿಜೆಪಿ ಬೆಂಬಲ ವ್ಯಕ್ತಪಡಿಸಿದ್ದು, ಇದರ ಜೊತೆಗೆ ಮೂವರು ಪಕ್ಷೇತರ ಸದಸ್ಯರು ಕೂಡ ಬೆಂಬಲ ಘೋಷಿಸಿದ್ದಾರೆ. ಇದರಿಂದ ಅನಾಯಾಸವಾಗಿ ಜೆಡಿಎಸ್ ಸದಸ್ಯ ಕೇಬಲ್ ಬಾಬು ಪಾಲಿಕೆಯ ಮೇಯರ್ ಆಗಿ ಆಯ್ಕೆಯಾಗಲಿದ್ದಾರೆ ಎಂದು ಶ್ರೀಕಾಂತ್ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಕಾಂಗ್ರೆಸ್ ಮಾತು ತಪ್ಪಿದ್ದರಿಂದ ನಿರ್ಧಾರ ಬದಲು: ಐಡಿಯಲ್ ಗೋಪಿ
ಶಿವಮೊ ಗ್ಗ: ಜೆಡಿಎಸ್‌ಗೆ ಮೇಯರ್ ಸ್ಥಾನ ಬಿಟ್ಟುಕೊಡುವುದಾಗಿ ಹೇಳಿದ್ದ ಕಾಂಗ್ರೆಸ್ ಮಾತು ತಪ್ಪಿದ ಹಿನ್ನೆಲೆಯಲ್ಲಿ ಜೆಡಿಎಸ್-ಬಿಜೆಪಿಯ ಮೈತ್ರಿ ಕೂಟಕ್ಕೆ ಬೆಂಬಲ ನೀಡುವುದಾಗಿ ಸ್ವತಂತ್ರ ಅಭ್ಯರ್ಥಿ, ಪಾಲಿಕೆ ಸಸ್ಯ ಐಡಿಯಲ್ ಗೋಪಿ ತಿಳಿಸಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಎರಡು ಬಾರಿ ಜೆಡಿಎಸ್ ಮುಖಂಡರ ಮನವಿಯ ಮೇರೆಗೆ ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ್ದೆವು. ಇದೀಗ ಜೆಡಿಎಸ್ ಕಾಂಗ್ರೆಸ್
ಸಖ್ಯತೊರೆದು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ನಾನೂ ಜೆಡಿಎಸ್‌ನ ನಿರ್ಧಾರವನ್ನು ಬೆಂಬಲಿಸಿ ಹೊಸ ಮೈತ್ರಿಕೂಟಕ್ಕೆ ಬೆಂಬಲ ವ್ಯಕ್ತಪಡಿಸುತ್ತೇನೆ. ಇದಕ್ಕಾಗಿ ಯಾವುದೇ ಷರತ್ತು ವಿಧಿಸಿಲ್ಲ. ತಮ್ಮ ರೀತಿಯಲ್ಲಿಯೇ ಇತರ ಇಬ್ಬರು ಸದಸ್ಯರೂ ಜೆಡಿಎಸ್-ಬಿಜೆಪಿ ಮೈತ್ರಿಕೂಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.







