ಮೋದಿಯಿಂದ ಅನವಶ್ಯಕ ಅರಾಜಕತೆ ಸೃಷ್ಟಿ
ಜನ ವೇದನಾ ಸಮಾವೇಶದಲ್ಲಿ ಗುಂಡೂರಾವ್ ಟೀಕೆ
ದಾವಣಗೆರೆ, ಫೆ.27: ಪ್ರಧಾನಿ ಮೋದಿ ದೇಶದಲ್ಲಿ ಅನವಶ್ಯಕವಾಗಿ ಆರ್ಥಿಕ ಅರಾಜಕತೆ ಸೃಷ್ಟಿಸಿ, ಸಾರ್ವಜನಿಕರನ್ನು ಸಂಕಷ್ಟಕ್ಕೆ ತಳ್ಳಿದ್ದಲ್ಲದೆ, ದೇಶದ ಆರ್ಥಿಕ ಹಿನ್ನಡೆಗೆ ಕಾರಣರಾಗಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಶ್ರೀ ಅಭಿನವ ರೇಣುಕಾ ಮಂದಿರದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಕೇಂದ್ರ ಸರಕಾರದ ನೋಟು ಅಮಾನ್ಯೀಕರಣದಿಂದ ಜನರಿಗೆ ಎದುರಾಗಿರುವ ಸಮಸ್ಯೆಗಳ ಹಿನ್ನೆಲೆಯಲ್ಲಿ ಏರ್ಪಡಿಸಲಾಗಿದ್ದ ಜನ ವೇದನಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.
ಕೇಂದ್ರ ಸರಕಾರ ಶ್ರೀಸಾಮಾನ್ಯರ ಪರವಾಗಿಲ್ಲ ಎಂಬುದು ಪ್ರಧಾನಿ ಮೋದಿ ನೋಟು ಅಮಾನ್ಯೀಕರಣದಿಂದಲೇ ಸಾಬೀತಾಗಿದೆ. ನೋಟು ರದ್ದತಿಯಿಂದ ಆಗಿರುವ ಸಮಸ್ಯೆ ಯನ್ನು ಇಲ್ಲಿಯ ವರೆಗೂ ಪರಿಹರಿಸಿಲ್ಲ. ಕೇಂದ್ರದ ಬಜೆಟ್‌ನಲ್ಲೂ ಯಾವುದೇ ಜನಪರ ಯೋಜನೆ ಘೋಷಣೆ ಮಾಡಲಿಲ್ಲ. ಇದರಿಂದಾಗಿ ಎಷ್ಟೋ ಕಂಪೆನಿಗಳು ನಷ್ಟಕ್ಕೆ ಒಳಗಾಗಿವೆ. ರಿಯಲ್ ಎಸ್ಟೇಟ್ ವ್ಯವಹಾರ ಬಿದ್ದು ಹೋಗಿದೆ. ಅಸಂಖ್ಯಾತ ಮಂದಿ ಕೆಲಸ ಕಳೆದುಕೊಂಡಿದ್ದಾರೆ ಎಂದು ಆಪಾದಿಸಿದರು.
ಬಿಜೆಪಿ ಮುಖಂಡರು ಸಿದ್ದರಾಮಯ್ಯ ಸರಕಾರದ ಸಾಧನೆ ಶೂನ್ಯ ಎನ್ನುತ್ತಿದ್ದಾರೆ. ಆದರೆ, ರಾಜ್ಯಸರಕಾರ 47 ಸಾವಿರ ಕೋಟಿ ರೂ. ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಂಡಿದೆ. ಕಳೆದ 4 ವರ್ಷದಲ್ಲಿ ಆಶ್ರಯ ಯೋಜನೆಯಡಿ 10 ಲಕ್ಷ ಮನೆ ನಿರ್ಮಿಸಲಾಗಿದ್ದು, ಇನ್ನೊಂದು ವರ್ಷದಲ್ಲಿ ಇನ್ನೂ 6 ಲಕ್ಷ ಮನೆ ನಿರ್ಮಾಣ ಮಾಡುವ ಗುರಿ ಹೊಂದಿದೆ. ಕಾಂಗ್ರೆಸ್ ವಿಧಾನಸಭಾ ಚುನಾವಣೆಗೂ ಮುನ್ನ ನೀಡಿದ್ದ 170 ಭರವಸೆಗಳ ಪೈಕಿ ಈ ವರೆಗೆ 136 ಭರವಸೆಗಳನ್ನು ಸಾಕಾರಗೊಳಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಶಾಸಕರಾದ ವಡ್ನಾಳ್ ರಾಜಣ್ಣ, ಡಿ.ಜಿ. ಶಾಂತನಗೌಡ, ಜಿಲ್ಲಾ ವೀಕ್ಷಕ ಹುಚ್ಚಪ್ಪ, ಆಸಗೋಡು ಜಯಸಿಂಹ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಕೆಎಸ್‌ಐಸಿ ಮಾಜಿ ಅಧ್ಯಕ್ಷ ಡಿ. ಬಸವರಾಜ್, ಕಿಸಾನ್ ಸಭಾದ ಅಧ್ಯಕ್ಷ ಸಚಿನ್‌ಮಿಗಾ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಶ್ವಿನಿ ಪ್ರಶಾಂತ್, ಮೇಯರ್ ರೇಖಾ ನಾಗರಾಜ್, ದಿನೇಶ್ ಕೆ. ಶೆಟ್ಟಿ, ದೂಡಾ ಅಧ್ಯಕ್ಷ ರಾಮಚಂದ್ರಪ್ಪ, ಎಪಿಎಂಸಿ ಅಧ್ಯಕ್ಷ ಮುದೇಗೌಡ್ರ ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು.







