ವರ್ಷದ ನಾಯಕನಾಗಿ ವಿರಾಟ್ ಕೊಹ್ಲಿ ಆಯ್ಕೆ
ಇಎಸ್‌ಪಿಎನ್ ಕ್ರಿಕ್‌ಇನ್‌ಫೋ ಅವಾರ್ಡ್ಸ್
ಹೊಸದಿಲ್ಲಿ, ಫೆ.27: ಭಾರತದ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ 10ನೆ ಆವೃತ್ತಿಯ ಇಎಸ್‌ಪಿಎನ್‌ಕ್ರಿಕ್ ಇನ್‌ಫೋ ಅವಾರ್ಡ್ಸ್‌ನಲ್ಲಿ ‘ವರ್ಷದ ನಾಯಕನಾಗಿ’ ನೇಮಕಗೊಂಡಿದ್ದಾರೆ.
ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡ ಈ ವರ್ಷ 12 ಟೆಸ್ಟ್‌ಗಳಲ್ಲಿ 9 ಪಂದ್ಯಗಳನ್ನು ಜಯಿಸಿದೆ. ಇಂಗ್ಲೆಂಡ್ ಬ್ಯಾಟ್ಸ್‌ಮನ್ ಬೆನ್ ಸ್ಟೋಕ್ಸ್ ವರ್ಷದ ಶ್ರೇಷ್ಠ ಟೆಸ್ಟ್ ಬ್ಯಾಟ್ಸ್‌ಮನ್ ಪ್ರಶಸ್ತಿ ಪಡೆದರು. ಸ್ಟೋಕ್ಸ್ ಕೇಪ್‌ಟೌನ್‌ನಲ್ಲಿ ನಡೆದ ದಕ್ಷಿಣ ಆಫ್ರಿಕ ವಿರುದ್ಧದ ಪಂದ್ಯದಲ್ಲಿ 198 ಎಸೆತಗಳಲ್ಲಿ 258 ರನ್ ಗಳಿಸಿದ್ದರು.
ಸ್ಟೋಕ್ಸ್ ಸಹ ಆಟಗಾರ ಸ್ಟುವರ್ಟ್ ಬ್ರಾಡ್ ಟೆಸ್ಟ್ ಪಂದ್ಯವೊಂದರಲ್ಲಿ 17 ರನ್‌ಗೆ 6 ವಿಕೆಟ್‌ಗಳನ್ನು ಕಬಳಿಸಿ ಇಂಗ್ಲೆಂಡ್‌ಗೆ ಸರಣಿ ಗೆಲ್ಲಲು ನೆರವಾಗಿದ್ದರು. ಶ್ರೇಷ್ಠ ಬೌಲಿಂಗ್ ಪ್ರದರ್ಶಿಸಿರುವ ಬ್ರಾಡ್ ಸತತ ಎರಡನೆ ಬಾರಿ ವರ್ಷದ ಶ್ರೇಷ್ಠ ಟೆಸ್ಟ್ ಬೌಲರ್ ಆಗಿ ಆಯ್ಕೆಯಾಗಿದ್ದಾರೆ.
ಇಯಾನ್ ಚಾಪೆಲ್, ಮಹೇಲ ಜಯವರ್ಧನೆ, ರಮೀಝ್ ರಾಜಾ, ಇಶಾ ಗುಹಾ, ಸಂಬಿತ್ ಬಾಲ್, ಕೋರ್ಟ್ನಿ ವಾಲ್ಶ್, ಮಾರ್ಕ್ ಬುಚರ್ ಹಾಗೂ ಸೈಮನ್ ತೌಫೆಲ್ ಸಹಿತ ಮಾಜಿ ಕ್ರಿಕೆಟ್ ದಿಗ್ಗಜರು, ಇಎನ್‌ಪಿಎನ್ ಕ್ರಿಕ್‌ಇನ್‌ಫೋದ ಹಿರಿಯ ಸಂಪಾದಕರು, ಬರಹಗಾರರು ಹಾಗೂ ಜಾಗತಿಕ ವರದಿಗಾರರನ್ನು ಒಳಗೊಂಡ ಸ್ವತಂತ್ರ ಜ್ಯೂರಿ ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡುತ್ತದೆ.
ಸೆಂಚೂರಿಯನ್‌ನಲ್ಲಿ ಆಸ್ಟ್ರೇಲಿಯದ ವಿರುದ್ಧ 178 ರನ್ ಗಳಿಸಿದ್ದ ದಕ್ಷಿಣ ಆಫ್ರಿಕದ ಬ್ಯಾಟ್ಸ್‌ಮನ್ ಕ್ವಿಂಟನ್ ಡಿಕಾಕ್ ವರ್ಷದ ಏಕದಿನ ಬ್ಯಾಟ್ಸ್‌ಮನ್ ಗೌರವಕ್ಕೆ ಪಾತ್ರರಾಗಿದ್ದಾರೆ.
ಗಯಾನದಲ್ಲಿ ನಡೆದಿದ್ದ ತ್ರಿಕೋನ ಏಕದಿನ ಸರಣಿಯಲ್ಲಿ ದಕ್ಷಿಣ ಆಫ್ರಿಕದ ವಿರುದ್ಧ 27 ರನ್‌ಗೆ 6 ವಿಕೆಟ್ ಉಡಾಯಿಸಿದ್ದ ವೆಸ್ಟ್‌ಇಂಡೀಸ್‌ನ ಸ್ಪಿನ್ನರ್ ಸುನೀಲ್ ನರೇನ್ ವರ್ಷದ ಶ್ರೇಷ್ಠ ಏಕದಿನ ಬೌಲರ್ ಆಗಿ ಆಯ್ಕೆಯಾಗಿದ್ದಾರೆ.
ಕೋಲ್ಕತಾದಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಟ್ವೆಂಟಿ-20 ವಿಶ್ವಕಪ್‌ನ ಫೈನಲ್‌ನಲ್ಲಿ ಅಜೇಯ 34 ರನ್ ಗಳಿಸಿದ್ದ ಕಾರ್ಲಸ್ ಬ್ರಾತ್‌ವೇಟ್ ವರ್ಷದ ಶ್ರೇಷ್ಠ ಟ್ವೆಂಟಿ-20 ಬ್ಯಾಟ್ಸ್‌ಮನ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಟ್ವೆಂಟಿ-20 ವಿಶ್ವಕಪ್ ಫೈನಲ್‌ನಲ್ಲಿ ಅಂತಿಮ ಓವರ್‌ನಲ್ಲಿ ಸತತ ನಾಲ್ಕು ಸಿಕ್ಸರ್‌ಗಳನ್ನು ಸಿಡಿಸಿದ್ದ ಬ್ರಾತ್‌ವೈಟ್ ವಿಂಡೀಸ್ ಟ್ವೆಂಟಿ-20 ಚಾಂಪಿಯನ್ ಆಗಲು ಕಾರಣರಾಗಿದ್ದರು.
ಕೋಲ್ಕತಾದಲ್ಲಿ ನ್ಯೂಝಿಲೆಂಡ್ ವಿರುದ್ಧ ನಡೆದಿದ್ದ ಟ್ವೆಂಟಿ-20 ವಿಶ್ವಕಪ್ ಪಂದ್ಯದಲ್ಲಿ 22 ರನ್‌ಗೆ 5 ವಿಕೆಟ್ ಕಬಳಿಸಿದ್ದ ಬಾಂಗ್ಲಾದೇಶದ ಎಡಗೈ ವೇಗದ ಬೌಲರ್ ಮುಸ್ತಫಿಝುರ್ರಹ್ಮಾನ್ ವರ್ಷದ ಶ್ರೇಷ್ಠ ಟ್ವೆಂಟಿ-20 ಬೌಲರ್ ಆಗಿ ಆಯ್ಕೆಯಾಗಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 19 ವಿಕೆಟ್‌ಗಳನ್ನು ಪಡೆದು ಚೊಚ್ಚಲ ಪಂದ್ಯದಲ್ಲಿ ಮಿಂಚಿದ್ದ ಬಾಂಗ್ಲಾದೇಶದ ಯುವ ಆಟಗಾರ ಮೆಹೆದಿ ಹಸನ್ ಮಿರಾಝ್ ವರ್ಷದ ಉದಯೋನ್ಮುಖ ಆಟಗಾರ ಪ್ರಶಸ್ತಿಗೆ ಭಾಜನರಾದರು.
ಎಲ್ಲ ಮೂರು ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉತ್ತಮ ಸಾಧನೆ ಮಾಡಿರುವ ಮಹಿಳಾ ಕ್ರಿಕೆಟಿಗರಿಗೆ ಈ ವರ್ಷ ಇಎಸ್‌ಪಿಎನ್ ಕ್ರಿಕ್‌ಇನ್‌ಫೋ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.
ಟ್ವೆಂಟಿ-20 ವಿಶ್ವಕಪ್ ಫೈನಲ್‌ನಲ್ಲಿ ಮೂರು ಬಾರಿಯ ಚಾಂಪಿಯನ್ ಆಸ್ಟ್ರೇಲಿಯ ವಿರುದ್ಧ 45 ಎಸೆತಗಳಲ್ಲಿ 66 ರನ್ ಗಳಿಸಿದ್ದ ವೆಸ್ಟ್‌ಇಂಡೀಸ್‌ನ ಹೇಲೆ ವಿಲಿಯಮ್ಸ್ ವರ್ಷದ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿಗೆ ಭಾಜನರಾದರು.
ಟ್ವೆಂಟಿ-20 ವಿಶ್ವಕಪ್‌ನ ಗ್ರೂಪ್ ಪಂದ್ಯದಲ್ಲಿ ಆಸ್ಟ್ರೇಲಿಯದ ವಿರುದ್ಧ 13 ರನ್‌ಗೆ 3 ವಿಕೆಟ್‌ಗಳನ್ನು ಕಬಳಿಸಿದ್ದ ನ್ಯೂಝಿಲೆಂಡ್‌ನ ಪ್ರತಿಭಾನ್ವಿತ ಆಫ್ ಸ್ಪಿನ್ನರ್ ಲೆಗ್ ಕಾಸ್ಪೆರೆಕ್ ವರ್ಷದ ಶ್ರೇಷ್ಠ ಬೌಲರ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.







