ಆಸ್ಟ್ರೇಲಿಯ ಸ್ಪಿನ್ನರ್ ಓ’ಕೀಫೆ ಯಶಸ್ಸಿನ ಹಿಂದೆ ಭಾರತದ ಮಾಜಿ ಆಟಗಾರ

ಪುಣೆ, ಫೆ.27: ಭಾರತ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಆಸ್ಟ್ರೇಲಿಯದ ಸ್ಪಿನ್ನರ್ ಸ್ಟೀಫನ್ ಓ’ಕೀಫೆ ಅವರ ಅಮೋಘ ಬೌಲಿಂಗ್‌ನ ಹಿಂದೆ ಭಾರತದ ಮಾಜಿ ಆಟಗಾರ ಇದೀಗ ಆಸ್ಟ್ರೇಲಿಯ ಕ್ರಿಕೆಟ್ ತಂಡದ ಸ್ಪಿನ್ ಸಲಹೆಗಾರನಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀಧರನ್ ಶ್ರೀರಾಮ್ ಅವರ ಕೊಡುಗೆ ಅಪಾರವಿದೆ.
ಮೊದಲ ಟೆಸ್ಟ್‌ನಲ್ಲಿ ಒಟ್ಟು 12 ವಿಕೆಟ್‌ಗಳನ್ನು ಪಡೆದಿರುವ ಓ’ಕೀಫೆ ತನ್ನ ಪ್ರದರ್ಶನದ ಎಲ್ಲ ಶ್ರೇಯಸ್ಸನ್ನು ಶ್ರೀರಾಮ್‌ಗೆ ಸಲ್ಲಿಸಿದ್ದಾರೆ. ಮೊದಲ ಟೆಸ್ಟ್‌ನ ಎರಡನೆ ದಿನದಾಟದ ಭೋಜನವಿರಾಮದ ವೇಳೆ ಶ್ರೀರಾಮ್ ನೀಡಿರುವ ಸಲಹೆ ಓ’ಕೀಫೆ ಅವರ ಉತ್ತಮ ಬೌಲಿಂಗ್‌ಗೆ ನೆರವಾಯಿತು. ಭೋಜನ ವಿರಾಮಕ್ಕೆ ಮೊದಲು 7 ಓವರ್ ಬೌಲಿಂಗ್ ಮಾಡಿದ್ದ ಓ’ಕೀಫೆ 23 ರನ್ ಬಿಟ್ಟುಕೊಟ್ಟಿದ್ದರು. ದಾಂಡಿಗರಿಗೆ ಹೆಚ್ಚು ಸವಾಲಾಗಲು ವಿಫಲರಾಗಿದ್ದರು. ಲಂಚ್ ವಿರಾಮದಲ್ಲಿ ಊಟ ಮಾಡದೇ ಯೋಚಿಸುತ್ತಾ ಕುಳಿತ್ತಿದ್ದ ಓ’ಕೀಫೆಯನ್ನು ಗಮನಿಸಿದ್ದ ಶ್ರೀರಾಮ್ ಅವರು ಬೇಸರದಲ್ಲಿರುವುದನ್ನು ಗಮನಿಸಿದರು.
ಆಸ್ಟ್ರೇಲಿಯದಲ್ಲಿ ಹೇಗೆ ಬೌಲಿಂಗ್ ಮಾಡುತ್ತಿಯೋ ಅದೇ ರೀತಿ ಭಯಪಡದೇ ಬೌಲಿಂಗ್ ಮಾಡುವಂತೆ ಸಲಹೆ ನೀಡಿದರು. ಶ್ರೀರಾಮ್ ಸಲಹೆ ಫಲ ನೀಡಿತು. ಓ’ಕೀಫೆ 21.1 ಓವರ್‌ಗಳಲ್ಲಿ 12 ವಿಕೆಟ್‌ಗಳನ್ನು ಉರುಳಿಸಿ ಆಸ್ಟ್ರೇಲಿಯ ಮೊದಲ ಟೆಸ್ಟ್‌ನಲ್ಲಿ 333 ರನ್ ಅಂತರದಿಂದ ಜಯ ಸಾಧಿಸಲು ನೆರವಾದರು.
ಶ್ರೀರಾಮ್ ಅವರು ಶೇನ್ ವಾರ್ನ್ ಇಲ್ಲವೇ ಮುತ್ತಯ್ಯ ಮುರಳೀಧರನ್‌ರಷ್ಟು ಜನಪ್ರಿಯ ಸ್ಪಿನ್ನರ್ ಅಲ್ಲ. ಟೆಸ್ಟ್ ಕ್ರಿಕೆಟ್‌ನಲ್ಲಿ ನೂರಾರು ವಿಕೆಟ್‌ಗಳನ್ನು ಪಡೆದಿಲ್ಲ. 2000ರ ಆದಿಯಲ್ಲಿ ಭಾರತದ ಪರ ಕೇವಲ 8 ಏಕದಿನ ಪಂದ್ಯಗಳನ್ನು ಆಡಿರುವ ಶ್ರೀರಾಮ್ 81 ರನ್ ಗಳಿಸಿದ್ದು, 9 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 53ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಶ್ರೀರಾಮ್ ಅಸ್ಸಾಂ, ಮಹಾರಾಷ್ಟ್ರ ಹಾಗೂ ಗೋವಾದಂತಹ ಸಣ್ಣ ತಂಡದೊಂದಿಗೆ ರಣಜಿ ಪಂದ್ಯಗಳನ್ನು ಆಡಿದ್ದರು.
ಆಸ್ಟ್ರೇಲಿಯ ‘ಎ’ ತಂಡ 2015ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಆಸೀಸ್ ತಂಡದೊಂದಿಗೆ ಕೆಲಸ ಮಾಡಿದ್ದರು. ದಕ್ಷಿಣ ಆಫ್ರಿಕ ತಂಡದಲ್ಲಿ ಫೀಲ್ಡಿಂಗ್ ಕೋಚ್ ಹಾಗೂ ಸ್ಪಿನ್ ಸಲಹೆಗಾರನಾಗಿ ಹಾಗೂ ಐಪಿಎಲ್‌ನ ಡೆಲ್ಲಿ ಡೇರ್ ಡೆವಿಲ್ಸ್ ತಂಡದಲ್ಲಿ ಸಹಾಯಕ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.
ಆಸ್ಟ್ರೇಲಿಯ ಕ್ರಿಕೆಟ್‌ನೊಂದಿಗೆ ಶ್ರೀರಾಮ್ ದೀರ್ಘಕಾಲದ ನಂಟು ಹೊಂದಿದ್ದಾರೆ. ಎಸ್.ಎಸ್. ದಾಸ್ ಹಾಗೂ ಮುಹಮ್ಮದ್ ಕೈಫ್‌ರೊಂದಿಗೆ ಆಸ್ಟ್ರೇಲಿಯಕ್ಕೆ ತೆರಳಿದ್ದ ಅವರು ಮಿಚೆಲ್ ಸ್ಟಾರ್ಕ್ ಹಾಗೂ ನಥನ್ ಹೌರಿಟ್ಜ್‌ರೊಂದಿಗೆ ಅಡಿಲೇಡ್‌ನ ಕ್ರಿಕೆಟ್ ಅಕಾಡೆಮಿಯಲ್ಲಿ ಅಭ್ಯಾಸ ಮಾಡಿರುವ ಅನುಭವವಿದೆ. ಬಾರ್ಡರ್-ಗವಾಸ್ಕರ್ ಸ್ಕಾಲರ್‌ಶಿಪ್‌ನ್ನು ಪಡೆದ ಮೊದಲಿಗನಾಗಿದ್ದಾರೆ. ಇದೀಗ ಅವರು ಆಸ್ಟ್ರೇಲಿಯ ತಂಡ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳಲು ಸ್ಪಿನ್ ಸಲಹೆಗಾರನಾಗಿ ತಂಡಕ್ಕೆ ಸಹಕಾರಿಯಾಗಿದ್ದಾರೆ.
‘‘ನನ್ನ ಪ್ರಕಾರ ಕೋಚ್ ಹೆಸರು ಮುಖ್ಯ ವಿಷಯವಲ್ಲ. ನಾವು ನೀಡುವ ಸಲಹೆ ಯ ಮುಖಾಂತರವೇ ಆಟಗಾರರಿಂದ ಗೌರವ ಪಡೆಯಬೇಕು. ನಾನು ಆಸ್ಟ್ರೇಲಿಯ ಆಟಗಾರರೊಂದಿಗೆ ಸೂಕ್ಷ್ಮ ವಿಷಯ ಮಾತನಾಡಿದಾಗ ಅವರು ನನ್ನ ಮಾತನ್ನು ಆಲಿಸಿದರು. ನಮ್ಮ ಸಲಹೆಯನ್ನು ಆಸ್ಟ್ರೇಲಿಯ ಆಟಗಾರರು ಕಿವಿಕೊಟ್ಟು ಕೇಳುತ್ತಾರೆ. ನಾನು ಹೇಳಿದ ಅಂಶವನ್ನು ಅವರು ನೆಟ್ ಪ್ರಾಕ್ಟೀಸ್‌ನಲ್ಲಿ ಅಭ್ಯಾಸ ಮಾಡುತ್ತಾರೆ. ನಾನು ಸ್ಪಿನ್ನರ್‌ಗಳು ಮಾತ್ರವಲ್ಲ ಎಲ್ಲ ಆಟಗಾರರ ಬಳಿಯೂ ಮಾತನಾಡುವೆ. ಮುಖ್ಯ ಕೋಚ್ ನನಗೆ ಸ್ವಾತಂತ್ರ ನೀಡಿದ್ದಾರೆ. ನನ್ನ ಸಲಹೆಯನ್ನು ಅವರು ಎಷ್ಟು ಪಾಲಿಸುತ್ತಾರೋ ಗೊತ್ತಿಲ್ಲ. ಅವರೊಂದಿಗೆ ದೀರ್ಘಕಾಲ ಸಂವಹನ ನಡೆಸಲು ಪ್ರಯತ್ನಿಸುತ್ತಿರುವೆ’’ ಎಂದು ಶ್ರೀರಾಮ್ ಹೇಳಿದ್ದಾರೆ. .







