'ನಾನು ದೇಶ ವಿರೋಧಿಯಲ್ಲ' ರಿಜಿಜು ಟ್ವೀಟ್ ಗೆ ಕಾರ್ಗಿಲ್ ಹುತಾತ್ಮನ ಪುತ್ರಿ ಪ್ರತಿಕ್ರಿಯೆ

ಹೊಸದಿಲ್ಲಿ, ಫೆ.28: ಕಾರ್ಗಿಲ್ ಹುತಾತ್ಮರೊಬ್ಬರ ಪುತ್ರಿಯ ಫೇಸ್ ಬುಕ್ ಪೋಸ್ಟ್ ಒಂದು ‘ನಾಟ್ ಅಫ್ರೇಡ್ ಆಫ್ ಎಬಿವಿಪಿ’ ಅಭಿಯಾನ ಹುಟ್ಟು ಹಾಕಿ ಸಾಕಷ್ಟು ವಿವಾದಗಳಿಗೆ ಈಡಾಗಿರುವಂತೆಯೇ ಈ ಬಗ್ಗೆ ತನಗೆ ತುಂಬಾ ನೋವಾಗಿದೆ ಎಂದು ಗುರ್ಮೆಹರ್ ಕೌರ್ ಎಂಬ ಈ ವಿದ್ಯಾರ್ಥಿನಿ ಹೇಳಿಕೊಂಡಿದ್ದಾಳೆ.
ತಾನು ಯಾರ ಆದೇಶದಂತೆಯೂ ನಡೆಯುತ್ತಿಲ್ಲ ಎಂದು ‘‘ಯಾರೋ ಆಕೆಯ ಮನಸ್ಸನ್ನು ಕೆಡಿಸುತ್ತಿದ್ದಾರೆ’’ ಎಂದು ಟ್ವೀಟ್ ಮಾಡಿದ್ದ ಕೇಂದ್ರ ಸಚಿವ ಕಿರೆಣ್ ರಿಜಿಜುಗೆ ಪ್ರತಿಕ್ರಿಯೆಯಾಗಿ ಆಕೆ ಹೇಳಿದ್ದಾಳೆ. ‘‘ನನಗೆ ನನ್ನದೇ ಆದ ಮನಸ್ಸಿದೆ. ಯಾರು ಕೂಡ ನನ್ನ ಮನಸ್ಸನ್ನು ಕೆಡಿಸುತ್ತಿಲ್ಲ. ನಾನು ದೇಶವಿರೋಧಿಯಲ್ಲ’’ ಎಂದು ಆಕೆ ಹೇಳಿದ್ದಾಳೆ.
ಲೇಡಿ ಶ್ರೀರಾಮ್ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಕೌರ್ ಎಬಿವಿಪಿಯನ್ನು ಟೀಕಿಸಿ ವಾಕ್ ಸ್ವಾತಂತ್ರ್ಯದ ಬಗ್ಗೆ ಚರ್ಚೆಗೆ ಮತ್ತೆ ಆಸ್ಪದ ನೀಡಿದ್ದಾಳೆ. ಆಕೆಯ ತಂದೆ ಮನದೀಪ್ ಸಿಂಗ್ ಅವರು ಕಾಶ್ಮೀರದಲ್ಲಿ ಹುತಾತ್ಮರಾಗಿದ್ದರು. ತನ್ನನ್ನು ದೇಶ ವಿರೋಧಿ ಎಂದು ಜರಿದು ತನಗೆ ಅತ್ಯಾಚಾರ ಬೆದರಿಕೆಯನ್ನೂ ಒಡ್ಡಲಾಗಿದೆ ಎಂದು ಆಕೆ ಇತ್ತೀಚೆಗೆ ರಾಮ್ಜಾಸ್ ಕಾಲೇಜಿನಲ್ಲಿ ನಡೆದ ಗದ್ದಲದ ಬಗ್ಗೆ ಪ್ರತಿಕ್ರಿಯಿಸಿದ ನಂತರ ಹೇಳಿಕೊಂಡಿದ್ದಳು.
ಸೋಮವಾರ ದಿಲ್ಲಿ ಮಹಿಳಾ ಆಯೋಗ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರನ್ನು ಭೇಟಿಯಾದ 20 ವರ್ಷದ ಕೌರ್ ತನಗೆ ರಕ್ಷಣೆಯೊದಗಿಸಬೇಕೆಂದು ಕೋರಿದ್ದಾರೆ. ಆಕೆಗೀಗ ಹೋಂಗಾರ್ಡ್ ಸುರಕ್ಷೆಯನ್ನು ಒದಗಿಸಲಾಗಿದೆ ಎಂದು ಮಹಿಳಾ ಆಯೋಗ ತಿಳಿಸಿದೆ.







