ಇಂಡೊನೇಷ್ಯಾ ಪ್ರವಾಸಕ್ಕೆ ಸೌದಿ ದೊರೆಯ ಲಗೇಜು 506 ಟನ್ !
ಅಂತಹದ್ದೇನಿದೆ ಇದರಲ್ಲಿ ?
ರಿಯಾದ್, ಫೆ.28: ಸೌದಿ ಅರೇಬಿಯಾದ ದೊರೆ ಅಬ್ದುಲ್ ಅಝೀರ್ ಅಲ್-ಸೌದ್ ಅವರು ಈ ವಾರ ಒಂಬತ್ತು ದಿನಗಳ ಇಂಡೊನೇಷ್ಯಾ ಪ್ರವಾಸದ ಮೇಲೆ ಹೋಗುತ್ತಿದ್ದಾರೆ. ವಿಶ್ವದ ಅತಿ ದೊಡ್ಡ ಮುಸ್ಲಿಂ ರಾಷ್ಟ್ರವೊಂದಕ್ಕೆ ಸೌದಿ ದೊರೆಯೊಬ್ಬರು ಕಳೆದ 46 ವರ್ಷಗಳಲ್ಲಿ ಇದೇ ಪ್ರಥಮ ಬಾರಿಗೆ ಭೇಟಿ ನೀಡುತ್ತಿರುವುದು. ಆದರೆ ಈ ಭೇಟಿಯಲ್ಲಿ ಮತ್ತೊಂದು ವಿಶೇಷವಿದೆ.
ಸೌದಿ ದೊರೆ ತನ್ನೊಂದಿಗೆ ಇಂಡೊನೇಷ್ಯಾಗೆ 459 ಮೆಟ್ರಿಕ್ ಟನ್ ಭಾರದ ಲಗೇಜು ಕೂಡ ಕೊಂಡೊಯ್ಯುತ್ತಿದ್ದಾರೆ. ಏನೇನಿದೆ ಎಂದು ಯೋಚಿಸುತ್ತೀರಾ ? ಈ ಲಗೇಜಿನಲ್ಲಿದೆ ಎರಡು ಮರ್ಸಿಡಿಸ್ ಬೆನ್ಝ್ ಎಸ್600 ಲಿಮೋಸಿನ್ ಹಾಗೂ ಎರಡು ವಿದ್ಯುತ್ ಚಾಲಿತ ಇಲವೇಟರುಗಳು.
ಸೌದಿ ದೊರೆಯ ಲಗೇಜನ್ನು ನಿರ್ವಹಣೆ ಮಾಡುವ ಜವಾಬ್ದಾರಿಯನ್ನು ಪಿಟಿ ಜಸ ಅಂಗ್‌ಕಸ ಸೆಮೆಸ್ತ ಕಂಪೆನಿಗೆ ವಹಿಸಲಾಗಿದೆ ಹಾಗೂ ಈ ಕಾರ್ಯಕ್ಕೆ ಕಂಪೆನಿ ಒಟ್ಟು 572 ಉದ್ಯೋಗಿಗಳನ್ನು ನೇಮಿಸಿದೆ.
ಇಂಡೊನೇಷ್ಯಾ ಪ್ರವಾಸದ ವೇಳೆ ಸೌದಿ ದೊರೆಯ ತಂಡದಲ್ಲಿ 10 ಸಚಿವರು, 25 ರಾಜಕುಮಾರರು ಹಾಗೂ 100 ಮಂದಿ ಸುರಕ್ಷಾ ಸಿಬ್ಬಂದಿ ಸೇರಿದಂತೆ 1500 ಜನರಿರುತ್ತಾರೆ.
ಸೌದಿ ದೊರೆಗಳು ಹಿಂದಿನಿಂದಲೂ ವಿದೇಶಿ ಭೇಟಿಯನ್ನು ಸಾಕಷ್ಟು ಗಡದ್ದಾಗಿ ಮಾಡುತ್ತಾರೆ. 2015ರಲ್ಲಿ ವಾಷಿಂಗ್ಟನ್ ಗೆ ಭೇಟಿ ನೀಡಿದ್ದ ವೇಳೆ ಅವರು ಜಾರ್ಜ್ ಟೌನ್‌ನಲ್ಲಿರುವ ಇಡೀ ಫೋರ್ ಸೀಸನ್ಸ್ ಹೊಟೇಲನ್ನು ಬುಕ್ ಮಾಡಿದ್ದರು. ಈ ವಿಲಾಸಿ ಹೋಟೆಲಿನಲ್ಲಿ ಒಟ್ಟು 222 ಕೊಠಡಿಗಳಿದ್ದವು.
ಅದೇ ವರ್ಷ ಫ್ರಾನ್ಸ್ ದೇಶದ ರಿವೇರಾದ ಬೀಚಿನಲ್ಲಿ ಅವರ 1000 ಮಂದಿಯ ಗಡಣ ಆಗಮಿಸಿದಾಗ ಇಡೀ ಬೀಚನ್ನು ಸುರಕ್ಷಾ ಕಾರಣಗಳಿಗಾಗಿ ಸ್ಥಳೀಯರಿಗೆ ಮುಚ್ಚಿದ್ದು ಸಾಕಷ್ಟು ಟೀಕೆಗೊಳಗಾಗಿತ್ತು. ಸೌದಿ ತಂಡವು ಅಲ್ಲಿ ಇಲವೇಟರ್ ಒಂದನ್ನು ಸ್ಥಾಪಿಸುವ ಸಲುವಾಗಿ ಮರಳಿನ ಮೇಲೆ ನೇರವಾಗಿ ಕಾಂಕ್ರೀಟ್ ಸುರಿದ ಬಗ್ಗೆ ಸ್ಥಳೀಯ ಮೇಯರ್ ಫ್ರೆಂಚ್ ಅಧ್ಯಕ್ಷರಿಗೂ ದೂರಿದ್ದರು.
ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ಆಫ್ರಿಕಾ ದೇಶಕ್ಕೆ 2013ರಲ್ಲಿ ಪ್ರವಾಸ ಹೋದಾಗ ಅವರ ಜತೆ 14 ಲಿಮೋಸಿನ್ ಸಹಿತ 56 ವಾಹನಗಳು, ನೂರಾರು ಸೀಕ್ರೆಟ್ ಸರ್ವಿಸ್ ಏಜಂಟರು ಕೂಡ ಪ್ರಯಾಣ ಬೆಳೆಸಿದ್ದರು.