ನಾನು ಯಾರನ್ನು ನೋಯಿಸಲು ಹೇಳಿಕೆ ನೀಡಿಲ್ಲ: ಸಚಿವ ಖಾದರ್

ಮಂಗಳೂರು, ಫೆ.28: ಬಂದ್ ಮಾಡುವವರು ಕೇರಳ ಸಿ ಎಂ ಚಪ್ಪಲಿಗೂ ಸಮಾನರಲ್ಲ ಎಂಬ ಹೇಳಿಕೆಯನ್ನು ನಾನು ಯಾರನ್ನೂ ಅವಮಾನಿಸಲು ಮತ್ತು ಅವರ ಮನಸ್ಸನ್ನು ನೋಯಿಸಲು ಹೇಳಿಕೆ ನೀಡಿಲ್ಲ .ಅಚಾತುರ್ಯದಿಂದ ಚಪ್ಪಲಿ ಎಂಬ ಶಬ್ದ ಬಂದಿದೆ. ಕ್ಷಮೆ ಕೇಳಲ್ಲ, ಈ ಬಗ್ಗೆ ವಿಷಾದವಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಸ್ಪಷ್ಟಪಡಿಸಿದ್ದಾರೆ.
ಚಪ್ಪಲಿಯಲ್ಲಿ ಹೊಡೆಯಿರಿ ಎಂಬ ಅರ್ಥದ ಉದ್ದೇಶ ಹೇಳಿಕೆಯಲ್ಲಿ ಇರಲಿಲ್ಲ .ಸಂವಿಧಾನ ವಿರೋಧಿಗಳಿಗೆ ನೀಡಿದ ಹೇಳಿಕೆ ಬಾಯಿ ತಪ್ಪಿ ಬಂದಿದೆ. ಹಿರಿಯ ಜನಾರ್ದನ ಪೂಜಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನನ್ನ ಸಣ್ಣ ಮಗಳು ಕೂಡ ಇದನ್ನು ತಪ್ಪು ಎಂದು ಹೇಳಿದ್ದಾಳೆ. ಮುಂದೆ ಈ ರೀತಿ ಮಾತಾಡುವುದಿಲ್ಲ.ಇದನ್ನು ಕೆಲವರು ರಾಜಕೀಯ ಮಾಡುತ್ತಿದ್ದಾರೆ. ವಾಟ್ಸಪ್ ನಲ್ಲಿ ತಿರುಚುತ್ತಿದ್ದಾರೆ ಎಂದು ಹೇಳಿದರು.
ಪಾಕಿಸ್ತಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಹೋಗಿ ಚಹಾ ಕುಡಿದು ಬಂದಾಗ ಯಾರು ಮಾತನಾಡಲಿಲ್ಲ. ಆದರೆ ಹಿರಿಯರು, ಕೇರಳದ ಮುಖ್ಯ ಮಂತ್ರಿ ದಕ್ಷಿಣ ಕನ್ನಡಕ್ಕೆ ಬಂದಾಗ ಪಕ್ಷದ ಕಚೇರಿಗೆ ಬೆಂಕಿ, ಬಸ್ ಗೆ ಕಲ್ಲು ತೂರಾಟ ನಡೆಯಿತು. ಇದು ಸರಿಯಲ್ಲ . ಜಿಲ್ಲೆಗೆ ಕೆಟ್ಟ ಹೆಸರು ತರುವ ಜನರ ಧೋರಣೆಯನ್ನು ನಾನು ವಿರೋಧಿಸಿದ್ದೆ ಎಂದು ಖಾದರ್ ಹೇಳಿದರು.
ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ನಾಲ್ಕು ವರ್ಷಗಳ ಅಧಿಕಾರದ ಅವಧಿಯಲ್ಲಿ ಯಾವುದೇ ಭ್ರಷ್ಟಾಚಾರ ನಡೆಯಲಿಲ್ಲ. ಪ್ರತಿಪಕ್ಷಗಳಿಂದ ಇಲ್ಲ ಸಲ್ಲದ ಆರೋಪ ಕೇಳಿ ಬರುತ್ತಿದೆ. ಅವರ ತಟ್ಟೆಯ ಹೆಗ್ಗಣ ಬಿಟ್ಟು ಸೊಳ್ಳೆ ಹುಡುಕುತ್ತಿದ್ದಾರೆ.ಬಿಜೆಪಿ ರಾಜ್ಯದಲ್ಲಿ ಆಡಳಿತದಲ್ಲಿದ್ದಾಗ ೬ ತಿಂಗಳಿಗೊಮ್ಮೆ ಎಪಿಸೋಡ್ ಇತ್ತು ಎಂದು ಖಾದರ್ ಅಭಿಪ್ರಾಯಪಟ್ಟರು.





