ಮನಪಾಕ್ಕೆ 4ನೆ ಹಂತದ ಮುಖ್ಯಮಂತ್ರಿ ಅನುದಾನ ಡೌಟ್: ಶಾಸಕ ಲೋಬೋ

ಮಂಗಳೂರು, ಫೆ. 28: ಮಂಗಳೂರು ಮಹಾನಗರ ಪಾಲಿಕೆಗೆ ಮೂರು ಹಂತಗಳಲ್ಲಿ ನಗರೋತ್ಥಾನ ಯೋಜನೆಯಡಿ ತಲಾ 100 ರೂ. ಕೋಟಿ ರೂ.ಗಳಂತೆ ಮುಖ್ಯಮಂತ್ರಿಗಳ ವಿಶೇಷ ಅನುದಾನ ಲಭ್ಯವಾಗಿದೆ. ಆದರೆ ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿರುವ ನಗರಗಳಿಗೆ ರಾಜ್ಯ ಹಾಗೂ ಕೇಂದ್ರ ಸರಕಾರವು ತಲಾ 200 ಕೋಟಿ ರೂ.ಗಳ ಪ್ರತ್ಯೇಕ ಅನುದಾನವನ್ನು ನೀಡಬೇಕಾಗಿದೆ. ಮಂಗಳೂರು ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿರುವುದರಿಂದ 4ನೆ ಹಂತದ ನಗರೋತ್ಥಾನ ಅನುದಾನ ದೊರಕುವ ಸಾಧ್ಯತೆ ತೀರಾ ಕಡಿಮೆ ಇರುವ ಬಗ್ಗೆ ಮುನ್ಸೂಚನೆ ದೊರಕಿದೆ ಎಂದು ಶಾಸಕ ಜೆ.ಆರ್. ಲೋಬೋ ಮನಪಾ ಸಭೆಯಲ್ಲಿ ತಿಳಿಸಿದರು.
ನಗರೋತ್ಥಾನ ಯೋಜನೆ ಕುರಿತಂತೆ ವಿಷಯ ಪ್ರಸ್ತಾಪಿಸಿದ ಸದಸ್ಯ ಪ್ರೇಮಾನಂದ ಶೆಟ್ಟಿ, ಈಗಾಗಲೇ ಎರಡು ಹಂತಗಳ ಕಾಮಗಾರಿಗಳ ಪ್ರಗತಿಯಲ್ಲಿದ್ದು, 3ನೆ ಹಂತದತ ಯೋಜನೆಗಳು ತಯಾರಿಯಲ್ಲಿವೆ. ಪ್ರಥಮ ಹಂತದ ಕಾಮಗಾರಿ ಪೂರ್ಣಗೊಂಡಿದ್ದು, 2ನೆ ಹಂತದಲ್ಲಿ 50 ಕೋಟಿ ರೂ. ಹಾಗೂ ಮೂರನೆ ಹಂತದಲ್ಲಿ 15 ಕೋಟಿ ರೂ.ಗಳು ಖರ್ಚಾಗಿವೆ. ಇದರಿಂದಾಗಿ ನಾಲ್ಕನೆ ಹಂತದ ಅನುದಾನ ಬಿಡುಗಡೆ ವಿಳಂಬವಾಗಿದೆ ಎಂದು ಆರೋಪಿಸಿದರು.
ಈ ಬಗ್ಗೆ ಶಾಸಕ ಲೋಬೋ ಅವರು ಪ್ರತಿಕ್ರಿಯಿಸುತ್ತಾ, ನಾಲ್ಕನೆ ಹಂತದ ಅನುದಾನಕ್ಕೆ ಶಾಸಕರ ನೇತೃತ್ವದ ನಿಯೋಗ ಈಗಾಗಲೇ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದೆ. 3ನೆ ಹಂತದ ಅನುದಾನದ ಖರ್ಚಾಗದ ಹಿನ್ನೆಲೆಯಲ್ಲಿ ನಾಲ್ಕನೆ ಹಂತದ ಅನುದಾನ ಬಿಡುಗಡೆ ಆಗದಿರುವುದಲ್ಲ ಎಂದು ಸ್ಪಷ್ಟಪಡಿಸಿದರು.







