ಮೇ ತಿಂಗಳವರೆಗೆ ನೀರಿನ ಸಮಸ್ಯೆ ಇಲ್ಲ: ಮೇಯರ್ ಸ್ಪಷ್ಟನೆ

ಮಂಗಳೂರು, ಫೆ.28: ಪ್ರಸಕ್ತ ಸಾಲಿನಲ್ಲಿ ಮೇ ತಿಂಗಳವರೆಗೆ ನೀರಿನ ಸಮಸ್ಯೆ ಉದ್ಭವವಾಗದು. ತುಂಬೆಯ ಹೊಸ ಕಿಂಡಿ ಅಣೆಕಟ್ಟಿನಲ್ಲಿ 5 ಮೀಟರ್‌ವರೆಗೆ ನೀರನ್ನು ನಿಲ್ಲಿಸಲು ಅಗತ್ಯವಾದ ಭೂಸ್ವಾಧೀನ ಪ್ರಕ್ರಿಯೆಗಾಗಿ ಸಂತ್ರಸ್ತರಿಗೆ ಪರಿಹಾರ ನೀಡಲು ಈಗಾಗಲೇ 7 ಕೋಟಿ ರೂ. ಸರಕಾರದಿಂದ ಮಂಜೂರು ಆಗಿದೆ ಎಂದು ಮೇಯರ್ ಹರಿನಾಥ್ ಸ್ಪಷ್ಟಪಡಿಸಿದ್ದಾರೆ.
ಮನಪಾ ಸಾಮಾನ್ಯ ಸಭೆಯಲ್ಲಿದು ವಿಪಕ್ಷ ನಾಯಕಿ ರೂಪಾ ಡಿ. ಬಂಗೇರ ಅವರ ಪ್ರಶ್ನೆಯೊಂದಕ್ಕೆ ಅವರು ಈ ಸ್ಪಷ್ಟನೆಯನ್ನು ನೀಡಿದರು. ಎಳನೀರು ಚಿಪ್ಪು, ಮಾಂಸಾಹಾರ ತ್ಯಾಜ್ಯ ಸಂಗ್ರಹಣೆಗೆ ಪ್ರತ್ಯೇಕ ಟೆಂಡರ್!
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆ ನಡೆಸುತ್ತಿರುವ ಆ್ಯಂಟನಿ ವೇಸ್ಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ಕಾರ್ಯವೈಖರಿ ವಿರುದ್ಧ ಸದಸ್ಯರಿಂದ ಆಕ್ಷೇಪ, ಆರೋಪಗಳು ಇಂದಿನ ಸಭೆಯಲ್ಲೂ ಮುಂದುವರಿಯಿತು.
ಆ್ಯಂಟನಿ ಸಂಸ್ಥೆಯವರಿಗೆ 15 ಕೋಟಿ ರೂ. ಬಾಕಿ ಇದೆ ಎಂದು ಹೇಳಿಕೊಂಡಿದ್ದಾರೆ ಎಂದು ಸದಸ್ಯ ರಾಜೇಶ್ ಆರೋಪಿಸಿದರೆ, ಸಂಸ್ಥೆಗೆ ದಿನಕ್ಕೆ 200 ಟನ್ ತ್ಯಾಜ್ಯ ನಿರ್ವಹಣೆಗೆ ಒಪ್ಪಂದವಾಗಿದ್ದು, ಅವರು 350ರಿಂದ 400 ಟನ್ ತ್ಯಾಜ್ಯ ನಿರ್ವಹಣೆಯ ಬಿಲ್ ನೀಡುತ್ತಿದ್ದಾರೆ ಎಂದು ರಾಧಾಕೃಷ್ಣ ಆಪಾದಿಸಿದರು.
ಸದಸ್ಯರ ಆರೋಪಗಳಿಗೆ ಮೇಯರ್ ಹರಿನಾಥ್ ಪ್ರತಿಕ್ರಿಯಿಸಿ, ಆ್ಯಂಟನಿ ಸಂಸ್ಥೆಯವರು ಒಪ್ಪಂದದ ಪ್ರಕಾರ ಚರಂಡಿಗಳ ಹೂಳು ತೆಗೆಯುವ ಕೆಲಸ ಮಾಡುತ್ತಿಲ್ಲ. ಹಾಗಿದ್ದರೂ ಅದಕ್ಕೆ ಬಿಲ್ ನೀಡುತ್ತಿದ್ದಾರೆ. ಈ ಬಗ್ಗೆ ಅವರಿಗೆ ನೀಡಲಾಗುವ ಬಿಲ್‌ನಲ್ಲಿ ಕಡಿತ ಮಾಡಲಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ತನಿಖೆಯೂ ನಡೆಯುತ್ತಿದೆ. ಹಾಗಾಗಿ ಸಂಸ್ಥೆಗೆ ಮನಪಾದಿಂದ ಯಾವುದೇ ಹಳೆ ಬಿಲ್ ಪಾವತಿಗೆ ಬಾಕಿ ಇರುವುದಿಲ್ಲ. ಅವರು ಒಪ್ಪಂದಕ್ಕಿಂತ ಹೆಚ್ಚಿನ ತ್ಯಾಜ್ಯ ನಿರ್ವಹಣೆಯ ಬಿಲ್ ನೀಡುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಕೋಳಿ ಹಾಗೂ ಇತರ ಮಾಂಸ ತ್ಯಾಜ್ಯ, ಎಳನೀರು ಚಿಪ್ಪುಗಳ ನಿರ್ವಹಣೆಯನ್ನು ಮನಪಾದ ವತಿಯಿಂದ ಪ್ರತ್ಯೇಕ ಟೆಂಡರ್ ಕರೆದು ನಿರ್ವಹಿಸಲಾಗುವುದು. ಆ್ಯಂಟನಿ ಸಂಸ್ಥೆಗೆ 200 ಟನ್ ತ್ಯಾಜ್ಯ ನಿರ್ವಹಣೆಗೆ ಸೀಮಿತಗಳಿಸಲಾಗುವುದು ಎಂದು ವಿವರ ನೀಡಿದರು.







