ದಮ್ಮಾಮ್‌ನಲ್ಲಿ ಭಾರತದ 3 ಮಕ್ಕಳು ಈಜು ಕೊಳಕ್ಕೆ ಬಿದ್ದು ದಾರುಣ ಸಾವು

ದಮ್ಮಾಮ್, ಫೆ. 28: ಕೇರಳದ ಕೊಲ್ಲಂನ ವ್ಯಕ್ತಿಯ ಇಬ್ಬರು ಎಳೆಯ ಮಕ್ಕಳು ಹಾಗೂ ಗುಜರಾತ್‌ನ ವ್ಯಕ್ತಿಯ ಒಬ್ಬ ಪುತ್ರ ದಮ್ಮಾಮ್‌ನ ಈಜು ಕೊಳದಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಕೊಲ್ಲಂಕರುನಾಗಪಳ್ಳಿಯ ಬಶೀರ್-ಸೌಮಿ ದಂಪತಿಯ ಪುತ್ರರಾದ ಸಫ್ವಾನ್(6), ಸೌಫಾನ್ (4) ಹಾಗೂ ಓರ್ವ ಗುಜರಾತ್ ಬಾಲಕ ಮೃತಪಟ್ಟ ದುರ್ದೈವಿಗಳಾಗಿದ್ದು ಮೂವರೂ ಎಳೆ ಪ್ರಾಯದ ಪುಟ್ಟಮಕ್ಕಳು. ದಮ್ಮಾಮ್‌ನ ಫಸ್ಟ್ ಇಂಡಸ್ಟ್ರಿಯಲ್ ಸಿಟಿಯವಾಸದ ಸ್ಥಳದಲ್ಲಿರುವ ಈಜು ಕೊಳದಲ್ಲಿ ದುರಂತ ಸಂಭವಿಸಿದೆ.
ಸೋಮವಾರ ಸಂಜೆ ನಾಲ್ಕೂವರೆ ಗಂಟೆಗೆ ಘಟನೆ ನಡೆದಿದೆ. ಈಜು ಕೊಳವು ಬಹಳ ಸಮಯದಿಂದ ಪಾಳು ಬಿದ್ದಿತ್ತು. ಕಳೆದ ವಾರ ಸುರಿದ ಮಳೆಯಿಂದಾಗಿ ಅದು ತುಂಬಿಕೊಂಡಿತ್ತು. ಇದನ್ನು ನೋಡಲು ಮಕ್ಕಳು ಅತ್ತ ಹೋಗಿದ್ದರು. ಮೊದಲು ಸೌಫಾನ್ ನೀರಿಗೆ ಬಿದ್ದಿದ್ದಾನೆ. ಅವನನ್ನು ರಕ್ಷಿಸಲು ಅವನ ಅಣ್ಣ ಸಫ್ವಾನ್ ಮತ್ತು ಗುಜರಾತ್ ಬಾಲಕ ಪ್ರಯತ್ನಿಸಿದ್ದು ಆವೇಳೆ ಅವರಿಬ್ಬರೂ ನೀರಿಗೆ ಬಿದ್ದಿದ್ದರು. ಘಟನೆಯಲ್ಲಿ ಒಟ್ಟು ಮೂವರು ದಾರುಣವಾಗಿ ಮೃತಪಟ್ಟಿದ್ದಾರೆ. ಅಲ್ಲಿದ್ದ ಇತರ ಮಕ್ಕಳು ಓಡಿಹೋಗಿ ಹಿರಿಯರಿಗೆ ವಿಷಯ ತಿಳಿಸಿದ್ದಾರೆ. ಅವರು ಬಂದು ಮಕ್ಕಳನ್ನು ನೀರಿನಿಂದ ಮೇಲೆತ್ತಿ ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಲಿಲ್ಲ. ಅಷ್ಟರಲ್ಲಿ ಮೂವರು ಮಕ್ಕಳೂ ಮೃತರಾಗಿದ್ದರು. ಮೃತದೇಹಗಳನ್ನು ದಮ್ಮಾಮ್ ಅಲ್ಮನ ಆಸ್ಪತ್ರೆಯಲ್ಲಿರಿಸಲಾಗಿದೆ ಎಂದು ವರದಿ ತಿಳಿಸಿದೆ.





