ಪ್ರಚೋದನಕಾರಿ ಭಾಷಣ: ಬಜರಂಗದಳ ಮುಖಂಡನ ವಿರುದ್ದ ಕೇಸ್ ದಾಖಲು

ಶಿವಮೊಗ್ಗ, ಫೆ. 28: ಇತ್ತೀಚೆಗೆ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆದ ಗೋ ಸತ್ಯಾಗ್ರಹದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇರೆಗೆ ಬಜರಂಗದಳ ಸಂಘಟನೆಯ ಜಿಲ್ಲಾ ಸಂಚಾಲಕ ದೀನ ದಯಾಳು ಅವರ ವಿರುದ್ದ ಜಯನಗರ ಠಾಣೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
ಭಾಷಣದ ವೇಳೆ ದೀನದಯಾಳುರವರು ನಗರದಲ್ಲಿರುವ ಕಸಾಯಿಖಾನೆಗಳ ಕುರಿತಂತೆ ಹಾಗೂ ಒಂದು ಕೋಮಿನ ವಿರುದ್ದ ಪ್ರಚೋದನಕಾರಿಯಾಗಿ ಭಾಷಣ ಮಾಡಿದ್ದ ಆರೋಪ ಕೇಳಿಬಂದಿತ್ತು.
ಭಾಷಣದ ಸಂಭಾಷಣೆ ಸಂಗ್ರಹಿಸಿದ್ದ ಪೊಲೀಸರು ಪರಿಶೀಲನೆ ನಡೆಸಿದ್ದರು. ಇದರ ಆಧಾರದ ಮೇಲೆ ಅವರ ವಿರುದ್ದ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಸಿಆರ್‍ಪಿಸಿ 108 ಕಲಂ ಅನ್ವಯ ಒಂದು ವರ್ಷದ ಜಾಮೀನಿನ ಮುಚ್ಚಳಿಕೆ ಪಡೆಯುವಂತೆ ಎಫ್‍ಐಆರ್‍ನಲ್ಲಿ ನ್ಯಾಯಾಲಯವನ್ನು ಕೋರಲಾಗಿದೆ.
ಏನೀದು ಸತ್ಯಾಗ್ರಹ?:
ರವಿವಾರ ಈ ಸತ್ಯಾಗ್ರಹ ನಡೆದಿತ್ತು. ಹಿರಿಯೂರು ಮಠದ ಶ್ರೀ ಲಕ್ಷಣಾಚಾರ್ಯ ಸ್ವಾಮೀಜಿ, ಭದ್ರಗಿರಿಯ ಶ್ರೀ ಮುರುಗೇಶ್ ಸ್ವಾಮೀಜಿ, ಗೋಂದಿ ಮಠದ ಶ್ರೀ ನಾಮಾನಂದ ಸ್ವಾಮೀಜಿ, ಅರಕೆರೆಯ ಶ್ರೀ ಕರಿಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಗೋ ಸತ್ಯಾಗ್ರಹ ನಡೆದಿತ್ತು.





