ಪುತ್ತೂರು: ಪಿಕಪ್ ವಾಹನ ಹಿಂದಕ್ಕೆ ಚಲಿಸಿ ಇಬ್ಬರು ಕಾರ್ಮಿಕರ ಮೃತ್ಯು, ನಾಲ್ವರು ಗಂಭೀರ

ಪುತ್ತೂರು : ಎಂಜಿನ್ ಹೇರಿಕೊಂಡಿದ್ದ ಪಿಕಪ್ ವಾಹನವನ್ನು ಎತ್ತರ ಪ್ರದೇಶಕ್ಕೆ ದೂಡಿಕೊಂಡು ಹೋಗುತ್ತಿದ್ದ ವೇಳೆ ಪಿಕಪ್ ವಾಹನ ಹಿಂದಕ್ಕೆ ಚಲಿಸಿದ ಪರಿಣಾಮವಾಗಿ ಇಬ್ಬರು ಕಾರ್ಮಿಕರು ಅದರ ಅಡಿಗೆ ಬಿದ್ದು ಮೃತಪಟ್ಟ ಹಾಗೂ ನಾಲ್ವರು ಗಂಭೀರ ಗಾಯಗೊಂಡ ಘಟನೆ ಪುತ್ತೂರು ತಾಲೂಕಿನ ಗುಂಡ್ಯ ಸಮೀಪದ ಶಿರಿಬಾಗಿಲು ಎಂಬಲ್ಲಿ ಮಂಗಳವಾರ ಸಂಜೆ ಸಂಭವಿಸಿದೆ.
ಪಶ್ಚಿಮ ಬಂಗಾಳ ರಾಜ್ಯದ ಆಲಿಪೂರ್ ಜಿಲ್ಲೆಯ ಪೋರೆಸ್ಟ್ ಲೈನ್ ಟಿ.ಎಸ್ಟೇಟ್ ಬೀಚ್‌ಬಗನ್ ನಿವಾಸಿ ಜಂಬುವ ಅವರ ಪುತ್ರ ಆಶಿಸ್ ಓರನ್ (25) ಮತ್ತು ಟಿ.ಎಸ್ಟೇಟ್ ಬರ್ನೋಬಡಿ ನಿವಾಸಿ ಅರ್ಜುನ್ ಮುಂಡ ಅವರ ಪುತ್ರ ವಿಕಾಸ್ ಮುಂಡ (24) ಮೃತಪಟ್ಟವರು.
ಘಟನೆಯಲ್ಲಿ ಪಶ್ಚಿಮ ಬಂಗಾಳದ ನಿವಾಸಿಗಳಾದ ವಿಜಯ್, ಶಂಭು,ರಾಜನ್ ಮತ್ತು ಬಿಜಂಧರ್ ಅವರು ಗಂಭೀರ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ.
ಗುಂಡ್ಯ ಶಿರಿಬಾಗಿಲು ಸಮೀಪ ಸುರುಂಗ ಮಾರ್ಗ ನಿರ್ಮಾಣದ ಕೆಲಸ ಮಾಡುತ್ತಿದ್ದ ಕೂಲಿಕಾರ್ಮಿಕರಾದ ಈ ಆರು ಮಂದಿ ಕಾಮಗಾರಿಗೆ ಬಳಸುವ ಉಪಕರಣವನ್ನು (ಎಂಜೀನ್ ) ಪಿಕಪ್ ವಾಹನದಲ್ಲಿ ತುಂಬಿಸಿಕೊಂಡು ಹೋಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.
ಇಳಿಜಾರು ರಸ್ತೆಯಲ್ಲಿ ಎಂಜಿನಿನ್ ಹೇರಿಕೊಂಡಿದ್ದ ಪಿಕಪ್ ವಾಹನ ಚಲಿಸಿಕೊಂಡು ಮುಂದಕ್ಕೆ ಹೋಗದ ಕಾರಣ ಈ ಆರು ಮಂದಿ ಕಾರ್ಮಿಕರು ಸೇರಿಕೊಂಡು ಪಿಕಪ್ ವಾಹನವನ್ನು ಹಿಂದಿನಿಂದ ದೂಡಿಕೊಂಡು ಹೋಗುತ್ತಿದ್ದ ವೇಳೆ ಪಿಕಪ್ ವಾಹನ ಏಕಾಏಕಿಯಾಗಿ ಹಿಂದಕ್ಕೆ ಚಲಿಸಿದ ಪರಿಣಾಮವಾಗಿ ಈ ಕಾರ್ಮಿಕರು ಪಿಕಪ್‌ನಡಿಗೆ ಬಿದ್ದು ಗಂಭೀರ ಗಾಯಗೊಂಡರೆಂದು ತಿಳಿದು ಬಂದಿದೆ.
ಗಂಭೀರ ಗಾಯಗೊಂಡ ಆರು ಮಂದಿಯ ಪೈಕಿ ಆಶಿಸ್ ಓರನ್ ಹಾಗೂ ವಿಕಾಸ್ ಮುಂಡ ಮೃತಪಟ್ಟಿದ್ದು, ಉಳಿದ ನಾಲ್ವರನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಕರೆತಂದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ದು ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿದು ಬಂದಿದೆ.







