ಮುಸ್ಲಿಮರ ಹೆಣವನ್ನೂ ಸುಡಬೇಕು: ಸಾಕ್ಷಿ ಮಹಾರಾಜ್

ಹೊಸದಿಲ್ಲಿ, ಫೆ.28: ಸ್ಮಶಾನಗಳಲ್ಲಿ ಜಾಗದ ಕೊರತೆ ಇರುವ ಕಾರಣ ಮುಸ್ಲಿಮರ ಹೆಣವನ್ನು ಕೂಡಾ ಸುಡಬೇಕು.. ಇದು ಬಿಜೆಪಿಯ ಸಂಸದ ಸಾಕ್ಷಿ ಮಹಾರಾಜ್ ನೀಡಿದ ಹೇಳಿಕೆ.
ಆ ಭೂಮಿಯನ್ನು ದಫನಭೂಮಿ ಎನ್ನಿ.. ಅಥವಾ ಸ್ಮಶಾನ ಎನ್ನಿ. ಆದರೆ ಅಲ್ಲಿ ಯಾರನ್ನೂ ಹೂಳಬಾರದು. ಯಾಕೆಂದರೆ ಸ್ಮಶಾನಗಳಿಗೆ ಸ್ಥಳವೇ ಇಲ್ಲ ಎಂಬ ಸ್ಥಿತಿ ಇದೆ. ಈ ದೇಶದಲ್ಲಿ 2ರಿಂದ 2.5 ಕೋಟಿಯಷ್ಟು ಹಿಂದೂ ಸಂತರಿದ್ದು ಇವರ ನಿಧನಾನಂತರ ಇವರ ಸ್ಮರಣಾರ್ಥ ಸ್ಮಾರಕ ನಿರ್ಮಿಸಬೇಕು. ಇದಕ್ಕೆ ಭೂಮಿಯ ಅಗತ್ಯವಿದೆ. ದೇಶದಲ್ಲಿ ಸುಮಾರು 20 ಕೋಟಿ ಮುಸ್ಲಿಮರಿದ್ದಾರೆ. ಇವರೆಲ್ಲರಿಗೂ ಸಮಾಧಿ ನಿರ್ಮಿಸಬೇಕು ಎಂದಾದರೆ ಹಿಂದುಸ್ತಾನ್‌ನಲ್ಲಿ ಜಾಗ ಎಲ್ಲಿದೆ ಎಂದು ಸಾಕ್ಷಿ ಮಹಾರಾಜ್ ಪ್ರಶ್ನಿಸಿದರು.
ವಿವಾದಾಸ್ಪದ ಹೇಳಿಕೆಗಳಿಗೆ ಹೆಸರಾಗಿರುವ ಸಾಕ್ಷಿ ಮಹರಾಜ್, ದೇಶದ ಜನಸಂಖ್ಯೆ ಹೆಚ್ಚಲು ಮುಸ್ಲಿಮರು ಕಾರಣ ಎಂದು ಹೇಳಿಕೆ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು ಮತ್ತು ಇವರ ವಿರುದ್ಧ ಮೀರತ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಉತ್ತರಪ್ರದೇಶದಲ್ಲಿ ಚುನಾವಣಾ ಪ್ರಚಾರದ ಕಾವು ಪರಾಕಾಷ್ಠೆಗೆ ತಲುಪುತ್ತಿದ್ದಂತೆಯೇ ವಿವಾದಾಸ್ಪದ ಹೇಳಿಕೆಗಳ ಪಟ್ಟಿಯೂ ಬೆಳೆಯುತ್ತಿದೆ. ಈ ತಿಂಗಳ ಆರಂಭದ ದಿನದಲ್ಲಿ ಉತ್ತರ ಪ್ರದೇಶದಲ್ಲಿ ನಡೆದಿದ್ದ ಚುನಾವಣಾ ಪ್ರಚಾರ ರ್ಯಾಲಿಯೊಂದರಲ್ಲಿ ಮಾತನಾಡುತ್ತಿದ್ದ ಪ್ರಧಾನಿ ಮೋದಿ, ಒಂದು ಗ್ರಾಮದಲ್ಲಿ ಖಬ್ರಿಸ್ತಾನ್ ನಿರ್ಮಾಣವಾದರೆ ಅಲ್ಲಿ ಸ್ಮಶಾನ ಕೂಡಾ ನಿರ್ಮಾಣವಾಗಬೇಕು. ರಮಝಾನ್ ಸಂದರ್ಭ ನಿರಂತರ ವಿದ್ಯುತ್ ಪೂರೈಕೆ ಮಾಡುವುದಾದರೆ ದೀಪಾವಳಿ ಸಂದರ್ಭ ಏಕೆ ಮಾಡಲಾಗದು . ಇಲ್ಲಿ ತಾರತಮ್ಯದ ಧೋರಣೆ ಸಲ್ಲದು ಎಂದು ಉತ್ತರಪ್ರದೇಶದ ಎಸ್ಪಿ ಸರಕಾರವನ್ನು ಟೀಕಿಸಿದ್ದರು. ಮೋದಿಯ ಈ ಹೇಳಿಕೆ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.







