ಭೂ ಸುಧಾರಣಾ ಕಾಯ್ದೆಯಿಂದ ದೇಶದಲ್ಲಿ ಹಸಿರು ಕಾಂತ್ರಿಗೆ ನಾಂದಿ: ಆಸ್ಕರ್ ಫೆರ್ನಾಂಡೀಸ್

ಬಂಟ್ವಾಳ, ಫೆ.28: ಭೂ ಸುಧಾರಣಾ ಕಾಯ್ದೆ ಭಾರತ ದೇಶದಲ್ಲಿ ಹಸಿರು ಕಾಂತ್ರಿಗೆ ನಾಂದಿ ಹಾಡಿತು. ಮಾಜಿ ಪ್ರಧಾನಿ ಇಂದಿರಾ ಗಾಂಧಿರವರ 20 ಅಂಶಗಳ ಕಾರ್ಯಕ್ರಮ ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಇಡೀ ದೇಶದಲ್ಲಿ ಕರ್ನಾಟಕ ರಾಜ್ಯದಲ್ಲಿ ಮಾತ್ರ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ಬಂದಿದೆ ಎಂದು ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡೀಸ್ ಹೇಳಿದರು.
ಬಂಟ್ವಾಳ ವಿಧಾನಸಭಾ ಕ್ಷೇತ್ರ, ಪಾಣೆಮಂಗಳೂರು ಬ್ಲಾಕ್ ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಕರ್ನಾಟಕ ಸರಕಾರದ ಪ್ರತಿಷ್ಠಿತ ದೇವರಾಜ ಅರಸು ಪ್ರಶಸ್ತಿ ಪುರಸ್ಕೃತ ಬಿ.ಸುಬ್ಬಯ್ಯ ಶೆಟ್ಟಿ, ಬಿ.ಎ.ಮೊಯ್ದಿನ್ ಹಾಗೂ ದಿನೇಶ್ ಅಮೀನ್ ಮಟ್ಟುರವರಿಗೆ ಅಭಿನಂದನಾ ಸಮಾರಂಭ ಹಾಗೂ ಮದರ್ ತೆರೆಸಾ ಸಂತಪದವಿ ಪ್ರಾಫ್ತಿ ಸಂಭ್ರಮಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಿರಿಯರಾದ ಸುಬ್ಬಯ್ಯ ಶೆಟ್ಟಿ ಹಾಗೂ ಬಿ.ಎ.ಮೊಯ್ದಿನ್ ಅವರ ಮಾರ್ಗದರ್ಶನದಲ್ಲಿ ತಾತ್ವಿಕ ನೆಲೆಗಟ್ಟಿನ ಮೂಲಕ ಹೋರಾಟ ನಡೆಸಿ ಭೂಸುಧಾರಣೆಯನ್ನು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗಿದೆ. ಪಕ್ಷದ ತತ್ವ, ಸಿದ್ಧಾಂತದ ಅಡಿಯಲ್ಲಿ ನಡೆಸುವ ಹೋರಾಟಕ್ಕೆ ನಮ್ಮೆಲ್ಲರ ಸಹಕಾರವಿದೆ ಎಂದರು.
ಸನ್ಮಾನಿತರ ಬಗ್ಗೆ ಅಭಿನಂದನಾ ಭಾಷಣ ಮಾಡಿದ ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಡಾ. ಸಂದಾನಂದ ಪೆರ್ಲ, ರಾಜಕೀಯದಲ್ಲಿ ಮಾನವೀಯ ಧರ್ಮವನ್ನು ಪ್ರತಿಪಾದಿಸಿದ ಏಕೈಕ ರಾಜಕಾರಣಿ ಮಾಜಿ ಸಚಿವ ಬಿ.ಸುಬ್ಬಯ್ಯ ಶೆಟ್ಟಿ ಅವರು ಯುವ ಪೀಳಿಗೆಗೆ ಆದರ್ಶ ರಾಜಕಾರಣಿ ಆಗಿದ್ದಾರೆ ಎಂದರು.
ಮುಸ್ಲಿಮ್ ಲೇಖಕರ ಸಂಘದ ಉಪಾಧ್ಯಕ್ಷ ಮುಹಮ್ಮದ್ ಅಲಿ ಮಾತನಾಡಿ, ಮಾಜಿ ಸಚಿವ ಬಿ.ಎ.ಮೊಯ್ದಿನ್‌ರವರು ಮೇಲಿನಿಂದ ಹೇರಲ್ಪಟ್ಟ ನಾಯಕನಲ್ಲ. ಅವರೊಬ್ಬ ತಳಮಟ್ಟದ ಕಾರ್ಯಕರ್ತನಾಗಿ ಹಂತಹಂತವಾಗಿ ಬೆಳೆದ ನಾಯಕನಾಗಿದ್ದಾರೆ. ಅವರು ಬಂಟ್ವಾಳ ಕ್ಷೇತ್ರಕ್ಕೆ ಶಾಸಕನಾಗಿ ನೀಡಿದ ಕೊಡುಗೆ ಅಪಾರವಾಗಿದೆ. ಇಂದಿಗೂ ಇಲ್ಲಿನ ಜನತೆ ಅವರ ಸೇವೆಯನ್ನು ಸ್ಮರಿಸುತ್ತಾರೆ ಎಂದು ಹೇಳಿದರು.
ಸಾಹಿತಿ ಮತ್ತು ಸಂಶೋಧಕ ಮುದ್ದು ಮೂಡುಬೆಳ್ಳೆ ಮಾತನಾಡಿ, ಮೌಲ್ಯ ಮತ್ತು ನ್ಯಾಯಪರ ವಿಷಯಗಳ ಪ್ರತಿಪಾದಕರಾದ ದಿನೇಶ್ ಅಮೀನ್ ಮಟ್ಟು ಯುವ ಪತ್ರಕರ್ತರಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.
ವಿಧಾನ ಪರಿಷತ್‌ನ ಮಾಜಿ ಸಭಾಪತಿ ಬಿ.ಎಲ್.ಶಂಕರ್ ಮಾತನಾಡಿ, ದೇವರಾಜ ಅರಸು ಪ್ರಶಸ್ತಿ ಪುರಸ್ಕೃತ ಬಿ.ಸುಬ್ಬಯ್ಯ ಶೆಟ್ಟಿ, ಬಿ.ಎ.ಮೊಯ್ದಿನ್ ಆದರ್ಶ ರಾಜಕಾರಣಿಗಳಾಗಿ ದಿನೇಶ್ ಅಮೀನ್ ಮಟ್ಟು ಪತ್ರಕರ್ತನಾಗಿ ಸಮಾಜ ಸುಧಾರಣೆ ಮಾಡಿದವರಾಗಿದ್ದಾರೆ. ದೇವರಾಜ ಅರಸು ಯಶಸ್ವಿ ರಾಜಕಾರಣಿಯಾಗಿ ಗುರುತಿಸಿಕೊಂಡವರಾಗಿದ್ದಾರೆ ಎಂದು ಹೇಳಿದ ಅವರು, ಒಂದು ವಿಚಾರದ ಬಗ್ಗೆ ದೃಡವಾದ ನಿಲುವನ್ನು ತೆಗೆದುಕೊಳ್ಳುವವನೇ ನಿಜವಾದ ನಾಯಕ. ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ಘಟನೆಗಳನ್ನು ನೆನೆಸುವ ನಿಟ್ಟಿನಲ್ಲಿ ರಾಜ್ಯದ ಪ್ರತೀ ಬ್ಲಾಕ್ ಮಟ್ಟದಲ್ಲೂ ಕಾಂಗ್ರೆಸ್ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಆ ಮೂಲಕ ದೇಶಕ್ಕಾಗಿ ಬಲಿದಾನಗೈದ ಹಿರಿಯ ಜೀವಿಗಳನ್ನು ಸ್ಮರಿಸಬೇಕು ಎಂದರು.
ಪುತ್ತೂರು ಸಂತ ಫಿಲೋಮಿನ ಕಾಲೇಜು ಸ್ನಾತಕೋತ್ತರ ಕೇಂದ್ರದ ಕ್ಯಾಂಪಸ್ ಡೈಯರೆಕ್ಟರ್ ಹಾಗೂ ಚೆಯರ್‌ಮೆನ್ ಡಾ. ಆಂಟೊನಿ ಪ್ರಕಾಶ್ ಮೊಂತೆರೋ ಸಂತ ಮದರ್ ತೆರೆಸಾ ಗುಣಗಾನ ಮಾಡಿ, ಬಡವರ ಸೇವೆ ಕೃತಿಯಿಂದ ಮಾಡಬೇಕೆ ಹೊರೆತು ಮಾತಿನಿಂದಲ್ಲ. ಅಪೂರ್ವ ಮಾನವೀಯತೆಯ ಸಂಕೇತವಾಗಿದ್ದ ಮದರ್ ತೆರೆಸಾ ಅವರನ್ನು ನೆನಪಿಸುವುದು ಅಭಿನಂದನೀಯ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಸರಕಾರದ ಪ್ರತಿಷ್ಠಿತ ದೇವರಾಜ ಅರಸು ಪ್ರಶಸ್ತಿ ಪುರಸ್ಕೃತರಾದ ಬಿ.ಸುಬ್ಬಯ್ಯ ಶೆಟ್ಟಿ, ಬಿ.ಎ.ಮೊಯ್ದಿನ್ ಹಾಗೂ ದಿನೇಶ್ ಅಮೀನ್ ಮಟ್ಟುರವರನ್ನು ಸನ್ಮಾನಿಸಲಾಯಿತು.
ರಾಜ್ಯ ಆಹಾರ ಸಚಿವ ಯು.ಟಿ.ಖಾದರ್, ವಿಧಾನ ಪರಿಷತ್ ಸರಕಾರದ ಮುಖ್ಯ ಸಚೇತಕ ಐವನ್ ಡಿಸೋಜಾ, ಶಾಸಕರಾದ ಜೆ.ಆರ್.ಲೋಬೋ, ಶಕುಂತಳಾ ಶೆಟ್ಟಿ, ಅಭಯಚಂದ್ರ ಜೈನ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ.ಗಫೂರ್, ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ನಿರ್ದೇಶಕ ಡಾ. ರಘು, ದ.ಕ. ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಬಿ.ಎಂ.ಹನೀಫ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್ ವೇದಿಕೆಯಲ್ಲಿದ್ದರು.
ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಪ್ರಾಸ್ತಾವಿಸಿ ಸ್ವಾಗತಿಸಿದರು. ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ಬಾಸ್ ಅಲಿ ವಂದಿಸಿದರು. ಶಿಕ್ಷಕ ರಾಮಚಂದ್ರರಾವ್, ಬಾಲಕೃಷ್ಣ ಆಳ್ವ, ರಾಜೀವ ಕಕ್ಕೆಪದವು ಕಾರ್ಯಕ್ರಮ ನಿರೂಪಿಸಿದರು.







