ಮುಸ್ಲಿಮ್ ನಿಷೇಧ ಆದೇಶ: ವಿಚಾರಣೆ ನಿಲ್ಲಿಸಲು ಮೇಲ್ಮನವಿ ನ್ಯಾಯಾಲಯ ನಕಾರ

ಸ್ಯಾನ್‌ಫ್ರಾನ್ಸಿಸ್ಕೊ, ಫೆ. 28: ಏಳು ಮುಸ್ಲಿಮ್ ಬಾಹುಳ್ಯದ ದೇಶಗಳ ನಾಗರಿಕರಿಗೆ ಅಮೆರಿಕ ಪ್ರವೇಶವನ್ನು ನಿಷೇಧಿಸುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ತಡೆಹಿಡಿಯುವಂತೆ ಕಾನೂನು ಇಲಾಖೆ ಸಲ್ಲಿಸಿರುವ ಅರ್ಜಿಯನ್ನು ಅಮೆರಿಕದ ಫೆಡರಲ್ ಮೇಲ್ಮನವಿ ನ್ಯಾಯಾಲಯವೊಂದು ಸೋಮವಾರ ತಿರಸ್ಕರಿಸಿದೆ.
9ನೆ ಸರ್ಕೀಟ್ ಮೇಲ್ಮನವಿ ನ್ಯಾಯಾಲಯ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ, ವಿವಾದಾಸ್ಪದ ಆದೇಶವನ್ನು ಯಾಕೆ ಹೊರಡಿಸಬೇಕಾಯಿತು ಎನ್ನುವುದಕ್ಕೆ ಟ್ರಂಪ್ ಆಡಳಿತವು ಈಗ ವಿವರಣೆ ನೀಡಬೇಕಾಗುತ್ತದೆ.
9ನೆ ಸರ್ಕೀಟ್ ಮೇಲ್ಮನವಿ ನ್ಯಾಯಾಲಯವು ಈ ತಿಂಗಳ ಆರಂಭದಲ್ಲಿ ಟ್ರಂಪ್‌ರ ಮುಸ್ಲಿಮ್ ಪ್ರವೇಶ ಆದೇಶಕ್ಕೆ ತಡೆಯಾಜ್ಞೆ ನೀಡಿತ್ತು. ಈಗ ಅದರ ವಿಚಾರಣೆ ಮುಂದುವರಿಯುತ್ತಿದೆ. ಮೇಲ್ಮನವಿ ನ್ಯಾಯಾಲಯದ ನ್ಯಾಯಾಧೀಶರು ವ್ಯಕ್ತಪಡಿಸಿರುವ ಕಳವಳಗಳನ್ನು ನಿವಾರಿಸುವ ನೂತನ ಆದೇಶವೊಂದನ್ನು ಶೀಘ್ರವೇ ಹೊರಡಿಸುವುದಾಗಿ ಟ್ರಂಪ್ ಹೇಳಿದ್ದಾರೆ.
ಟ್ರಂಪ್ ಜನವರಿ 27ರಂದು ಹೊರಡಿಸಿದ ಆದೇಶವು ಪ್ರಪಂಚದಾದ್ಯಂತದ ವಿಮಾನ ನಿಲ್ದಾಣಗಳಲ್ಲಿ ಭಾರೀ ಗೊಂದಲಕ್ಕೆ ಕಾರಣವಾಗಿತ್ತು. ಅಮೆರಿಕಕ್ಕೆ ಪ್ರಯಾಣಿಸಲು ವೀಸಾ ಹೊಂದಿದ್ದ ಪ್ರಯಾಣಿಕರನ್ನು ವಿಮಾನಗಳಿಂದ ಕೆಳಗಿಳಿಸಲಾಗಿತ್ತು. ಹಾಗೂ ಅಮೆರಿಕದ ವಿಮಾನ ನಿಲ್ದಾಣಗಳಲ್ಲಿ ಬಂದಿಳಿದವರನ್ನು ವಾಪಸ್ ಕಳುಹಿಸಲಾಗಿತ್ತು.
ಭಯೋತ್ಪಾದಕರಿಂದ ಅಮೆರಿಕವನ್ನು ರಕ್ಷಿಸಲು ಪ್ರಯಾಣ ನಿರ್ಬಂಧ ಹೇರುವುದು ಅಗತ್ಯವಾಗಿದೆ ಎಂದು ಹೇಳಿದ್ದಾರೆ.
ಟ್ರಂಪ್ ಆದೇಶವು ಇರಾನ್, ಇರಾಕ್, ಯಮನ್, ಸುಡಾನ್, ಸಿರಿಯ, ಲಿಬಿಯ ಮತ್ತು ಸೊಮಾಲಿಯ ದೇಶಗಳ ಪ್ರಜೆಗಳಿಗೆ 90 ದಿನಗಳ ಕಾಲ ಅಮೆರಿಕ ಪ್ರವೇಶವನ್ನು ನಿಷೇಧಿಸಿತ್ತು.







