ಕೊಣಾಜೆ: ಮಾ.4ಕ್ಕೆ ‘ಲ್ಯಾಡ್ಲ್ ಇನ್ ಎ ಗೋಲ್ಡನ್ ಬೌಲ್' ಅನುವಾದ ಸಂಪುಟ ಅನಾವರಣ
ಕೊಣಾಜೆ, ಫೆ.28: ಮಂಗಳೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ.ಬಿ.ಸುರೇಂದ್ರ ರಾವ್ ಮತ್ತು ಮಂಗಳೂರು ವಿವಿ ಕನ್ನಡ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿರುವ ಡಾ.ಕೆ.ಚಿನ್ನಪ್ಪ ಗೌಡ ಸಂಪಾದಕತ್ವದ ‘ಲ್ಯಾಡ್ಲ್ ಇನ್ ಎ ಗೋಲ್ಡನ್ ಬೌಲ್( ತುಳು ಕವನಗಳ ಅನುವಾದ ಸಂಪುಟ) ಕೃತಿಯ ಅನಾವರಣ ಸಮಾರಂಭವು ಮಾ.4ರಂದು 11.30ಕ್ಕೆ ಮಂಗಳೂರು ಬಲ್ಮಠದ ಸಹೋದಯ ಸಭಾಂಗಣದಲ್ಲಿ ನಡೆಯಲಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಸಂಪುಟವನ್ನು ಅನಾವರಣಗೊಳಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ವಿದ್ವಾಂಸರಾದ ಡಾ.ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರು ವಹಿಸಲಿದ್ದು ಮುಖ್ಯ ಅತಿಥಿಯಾಗಿ ಖ್ಯಾತ ಸಾಹಿತಿ ಹಾಗೂ ವಿಮರ್ಶಕ ಡಾ.ಬಿ.ಎ.ವಿವೇಕ ರೈ ಅವರು ವಹಿಸಲಿದ್ದಾರೆ.
ಆಧುನಿಕ ಕಾಲಘಟ್ಟದ ತುಳುವಿನ ಸುಮಾರು 70 ಕವಿಗಳ ಸುಮಾರು 114 ತುಳುಕವನಗಳನ್ನು ಇಂಗ್ಲೀಷ್‌ಗೆ ಅನುವಾದಿಸಿ ಈ ಸಂಪುಟದಲ್ಲಿ ನೀಡಲಾಗಿದೆ. ಪ್ರಾತಿನಿಧಿಕ ಕವನಗಳು ಇಷ್ಟೊಂದು ಪ್ರಮಾಣದಲ್ಲಿ ಇಂಗ್ಲೀಷ್‌ಗೆ ಅನುವಾದಗೊಂಡು ಸಂಪುಟ ರೂಪದಲ್ಲಿ ಹೊರಬರುತ್ತಿರುವುದು ವಿಶೇಷವಾಗಿದೆ ಮತ್ತು ಇದು ಪ್ರಥಮ ಪ್ರಯತ್ನವಾಗಿದೆ.
ಆಧುನಿಕ ಕಾಲಘಟ್ಟದ ವಿಭಿನ್ನ ಆಶಯಗಳು ಮತ್ತು ಧೋರಣೆಗಳ ತುಳು ಕವನಗಳು ಇಂಗ್ಲೀಷ್‌ಗೆ ಅನುವಾದಗೊಳ್ಳುತ್ತಿದ್ದು ತುಳುವೇತರ ಓದುಗರಿಗೆ ಪ್ರಾತಿನಿಧಿಕ ಕವನಗಳ ಪರಿಚಯವು ಈ ಸಂಪುಟದ ಮೂಲಕ ಆಗಲಿದೆ. ಈ ಸಂಪುಟದಲ್ಲಿರುವ ಕವನಗಳ ಸಾಂಸ್ಕೃತಿಕ ಹಿನ್ನೆಲೆಯನ್ನು ಒದಗಿಸುವ ಉದ್ದೇಶದಿಂದ ಸಂಪಾದಕರು ಬರೆದಿರುವ ವಿಸ್ತಾರವಾದ ಪ್ರಾಸ್ತಾವಿಕ ಮಾತುಗಳು ಈ ಸಂಪುಟಕ್ಕೆ ಒಂದು ಅರ್ಥಪೂರ್ಣವಾದ ಪ್ರವೇಶಿಕೆಯಾಗಿರುವುದನ್ನು ಉಲ್ಲೇಖಿಸಬಹುದಾಗಿದೆ.







