ಬಡವರಿಗೂ ಗುಣಮಟ್ಟದ ವೈದ್ಯಕೀಯ ಶಿಕ್ಷಣ ನಮ್ಮ ಗುರಿ: ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್

ಮಣಿಪಾಲ, ಫೆ.28: ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೂ ಗುಣಮಟ್ಟದ ವೈದ್ಯಕೀಯ ಶಿಕ್ಷಣವನ್ನು ನೀಡುವುದು ನಮ್ಮ ಗುರಿಯಾಗಿದ್ದು, ಇದಕ್ಕಾಗಿ ಜಿಲ್ಲಾ ಕೇಂದ್ರಗಳಲ್ಲೂ ಸರಕಾರಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲು ನಾವು ಮುಂದಾಗಿದ್ದೇವೆ ಎಂದು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಹೇಳಿದ್ದಾರೆ.
ಮಣಿಪಾಲ ವಿವಿಯ ಸ್ಕೂಲ್ ಆಫ್ ಅಲೈಡ್ ಹೆಲ್ತ್ ಸಾಯನ್ಸ್‌ನ ವತಿಯಿಂದ ನಡೆಯುವ 'ಕ್ರಿಟಿಕಲ್ ಕೇರ್ ಫಿಸಿಯೋಥೆರಪಿ' ವಿಷಯದ ಕುರಿತ ಫಿಸಿಯೋಕಾನ್-2017 ವಿಚಾರ ಸಂಕಿರಣಕ್ಕೆ ಪೂರ್ವಬಾವಿಯಾಗಿ ಇಂದು ಮಣಿಪಾಲದ ಹೊಟೇಲ್ ವ್ಯಾಲಿವ್ಯೆನಲ್ಲಿ ನಡೆದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ದೇಶದಲ್ಲಿರುವ 130 ಕೋಟಿ ಜನಸಂಖ್ಯೆ ಅಭಿವೃದ್ಧಿಗೆ ಅಡ್ಡಿಯಲ್ಲ. ಈ ಜನಶಕ್ತಿಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ನಾವು ಅಭಿವೃದ್ಧಿಯನ್ನು ಸಾಧಿಸಬಹುದು. ಇದಕ್ಕೆ ಶಿಕ್ಷಣವೇ ಪ್ರಬಲ ಅಸ್ತ್ರವಾಗಿದೆ. ಎಲ್ಲರಿಗೂ ಗುಣಮಟ್ಟದ ಶಿಕ್ಷಣವನ್ನು ನೀಡಲು ಮುಂದಾಗಬೇಕು ಎಂದರು.
ವೈದ್ಯಕೀಯ ಶಿಕ್ಷಣದಲ್ಲಿ ಪಿಸಿಯೋಥೆರಪಿಗೆ ಹಿಂದೆ ಅಷ್ಟೊಂದು ಪ್ರಮುಖ ಸ್ಥಾನವಿರಲಿಲ್ಲ. ಅದು ಅರ್ಥೋಪೆಡಿಕ್ಸ್‌ನ ಒಂದು ಭಾಗವಾಗಿತ್ತು. ಆದರೆ ಇಂದು ಎಲ್ಲವೂ ಬದಲಾಗಿದೆ. ಫಿಸಿಯೋಥೆರಪಿ ಪ್ರತ್ಯೇಕ ಕಲಿಕಾ ವಿಷಯವಾಗಿದೆ. ಅನ್ವಯಿಕ ಆರೋಗ್ಯ ವಿಜ್ಞಾನ ವೈದ್ಯಕೀಯ ಶಿಕ್ಷಣದ ಪ್ರಮುಖ ಅಂಗವಾಗಿದೆ ಎಂದರು.
ರಾಜ್ಯದ ಸಂಜಯ್‌ಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಯನ್ಸ್ ನಲ್ಲಿ ಫಿಸಿಯೋಥೆರಪಿ ಕಲಿಕೆ ಇದ್ದು, ಇನ್ನೊಂದು ಫಿಸಿಯೋಥೆರಪಿ ಕಾಲೇಜು ಆರಂಬಿಸುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಡಾ.ಶರಣ್ ಪಾಟೀಲ್ ತಿಳಿಸಿದರು.
ಮಣಿಪಾಲ ವಿವಿಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರೊ ವೈಸ್ ಚಾನ್ಸಲರ್ ಡಾ.ಸುರೇಂದ್ರ ಶೆಟ್ಟಿ, ರಿಜಿಸ್ಟ್ರಾರ್ ಡಾ.ನಾರಾಯಣ ಸಭಾಹಿತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಣಿಪಾಲ ವಿವಿ ಕುಲಪತಿ ಡಾ.ವಿನೋದ್ ಭಟ್ ಅತಿಥಿಗಳನ್ನು ಸ್ವಾಗತಿಸಿದರೆ, ಕರ್ನಾಟಕ ರಾಜ್ಯ ಫಿಸಿಯೋಥೆರಪಿಸ್ಟ್ ಫೆಡರೇಷನ್‌ನ ಕಾರ್ಯ ನಿರ್ವಾಹಕ ಅಧ್ಯಕ್ಷ ಡಾ.ಯು.ಟಿ.ಇಫ್ತಿಕಾರ್ ಅಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸ್ಕೂಲ್ ಆಫ್ ಅಲೈಡ್ ಹೆಲ್ತ್ ಸಾಯನ್ಸ್‌ನ ಡೀನ್ ಡಾ.ಬಿ. ರಾಜಶೇಖರ್ ಸಚಿವರನ್ನು ಪರಿಚಯಿಸಿದರೆ, ಡಾ.ವೈಶಾಲಿ ಕೆ. ವಂದಿಸಿದರು. ಅಬ್ರಹಾಂ ಸ್ಯಾಮುವೆಲ್ ಬಾಬು ಕಾರ್ಯಕ್ರಮ ನಿರ್ವಹಿಸಿದರು.







