ಕಾಪು: ಅಪಘಾತ; ಬೈಕ್ ಸಹಸವಾರ ಮೃತ್ಯು

ಕಾಪು, ಫೆ.28: ಕಾಪು ರಾಜೀವ ಭವನ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಫೆ.27ರಂದು ಮಧ್ಯಾಹ್ನ ಪಿಕಪ್ ವಾಹನವೊಂದು ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಸವಾರ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಬೈಕ್ ಸಹಸವಾರ, ಉಚ್ಚಿಲ ನಿವಾಸಿ ಆನಂದ ಅಂಚನ್ ಎಂದು ಗುರುತಿಸಲಾಗಿದೆ. ಬೈಕ್ ಸವಾರ ದಿನೇಶ್ ತೀವ್ರವಾಗಿ ಗಾಯ ಗೊಂಡು ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇವರಿಬ್ಬರು ಬೈಕಿನಲ್ಲಿ ಕಟಪಾಡಿ ಕಡೆ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಪಿಕಪ್ ವಾಹನ ಬೈಕಿಗೆ ಢಿಕ್ಕಿ ಹೊಡೆಯಿತು. ಇದರಿಂದ ಇಬ್ಬರು ಸವಾರರು ರಸ್ತೆಗೆ ಬಿದ್ದು ಗಾಯಗೊಂಡರು.
ಇವರಲ್ಲಿ ಗಂಭೀರವಾಗಿ ಗಾಯಗೊಂಡ ಆನಂದ ಅಂಚನ್ ಉಡುಪಿ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





