ಕಿರಿಯ ಮಗನನ್ನು ಅಮೆರಿಕಕ್ಕೆ ಹಿಂತಿರುಗಲು ಬಿಡಲಾರೆ : ಜನಾಂಗೀಯ ದ್ವೇಷಕ್ಕೆ ಬಲಿಯಾದ ಕುಚಿಭೋಟ್ಲಾ ತಾಯಿಯ ನಿರ್ಧಾರ

ಹೈದರಾಬಾದ್, ಫೆ.28: ‘‘ನನ್ನ ಕಿರಿಯ ಮಗನನ್ನು ಮತ್ತೆ ಅಮೆರಿಕಕ್ಕೆ ಹಿಂತಿರುಗಲು ಬಿಡಲಾರೆ. ಆತ ಕುಟುಂಬದೊಂದಿಗೆ ಹೈದರಾಬಾದ್‌ಗೆ ನೆಲೆಸುವುದು ಒಳ್ಳೆಯದು’’. ಅಮೆರಿಕದ ಕನ್ಸಾಸ್‌ನಲ್ಲಿ ಜನಾಂಗೀಯವಾದಿಯೊಬ್ಬ ಗುಂಡಿನ ದಾಳಿಗೆ ಬಲಿಯಾದ ಶ್ರೀನಿವಾಸ್ ಕುಚಿಭೋಟ್ಲಾ ಅವರ ತಾಯಿಯ ದುಃಖತಪ್ತ ಮಾತುಗಳಿವು.
ಸೋಮವಾರ ನಸುಕಿನಲ್ಲಿ ಹೈದರಾಬಾದ್‌ಗೆ ವಿಮಾನದಲ್ಲಿ ಆಗಮಿಸಿದ ಕುಚಿಭೋಟ್ಲಾ ಅವರ ಪಾರ್ಥಿವ ಶರೀರವನ್ನು ನಗರದ ಹೊರವಲಯದಲ್ಲಿರುವ ಬಾಚುಪಲ್ಲಿಗೆ ತರಲಾಗಿತ್ತು. ತನ್ನ ಮಗನ ಮೃತದೇಹವನ್ನು ಕಂಡು ತಾಯಿ ಪರ್ವತ ವರ್ಧಿನಿಯ ಶೋಕಕ್ಕೆ ಪಾರವೇ ಇರಲಿಲ್ಲ. ‘‘ನನ್ನ ಮಗ ಆ ದೇಶದ ಸೇವೆ ಮಾಡಲು ಅಲ್ಲಿಗೆ ಹೋಗಿದ್ದ. ಕುಚಿಭೋಟ್ಲಾ ಕುಟುಂಬದ ಓರ್ವ ಸದಸ್ಯ ಉತ್ತಮ ಭವಿಷ್ಯ ಅರಸಿ ಅಮೆರಿಕಕ್ಕೆ ತೆರಳಿರುವುದು ನಮಗೆ ಸಂತಸ ತಂದಿತ್ತು. ಆತ ಕೊಲೆಯಾಗುವಂತಹ ಯಾವ ಅಪರಾಧವನ್ನು ಮಾಡಿದ್ದ ’’ಎಂದು ಆಕೆ ದುಃಖಿತರಾಗಿ ಪ್ರಶ್ನಿಸಿದರು.
ಅಮೆರಿಕದಲ್ಲಿ ಉದ್ಯೋಗದಲ್ಲಿರುವ ತನ್ನ ಕಿರಿಯ ಪುತ್ರ ಸಾಯಿಕಿರಣ್, ಕುಟುಂಬದೊಂದಿಗೆ ಭಾರತಕ್ಕೆ ವಾಪಸಾಗಬೇಕೆಂದು ಕೇಳುವುದಾಗಿ ಆಕೆ ಹೇಳುತ್ತಾರೆ.
ಕುಚಿಭೋಟ್ಲಾ ಅವರ ತಂದೆ ಒತ್ತರಿಸಿ ಬರುತ್ತಿದ್ದ ದುಃಖವನ್ನು ನಿಯಂತ್ರಿಸಿಕೊಳ್ಳುತ್ತಾ‘‘ ಇದೆಲ್ಲಾ ವಿಧಿಯಾಟವೆಂದು ನಾನು ಭಾವಿಸುತ್ತೇನೆ. ಅಮೆರಿಕದಲ್ಲಿ ಉದ್ಯೋಗದಲ್ಲಿರುವ ಎಲ್ಲಾ ಭಾರತೀಯರ ಭದ್ರತೆಯ ಬಗ್ಗೆ ಸರಕಾರ ಕಾಳಜಿವಹಿಸಬೇಕು’’ ಎಂದರು. ಕುಚಿಭೋಟ್ಲಾ ಅವರ ಪತ್ನಿ ಸುನಯನಾ ಕೂಡಾ ಪಾರ್ಥಿವ ಶರೀರದೊಂದಿಗೆ ವಿಮಾನದಲ್ಲಿ ಆಗಮಿಸಿದ್ದರು.
ಕುಚಿಭೋಟ್ಲಾ ಅವರ ಪಾರ್ಥಿವ ಶರೀರದ ಅಂತಿಮದರ್ಶನವನ್ನು ಪಡೆಯಲು ಅವರ ಬಂಧುಗಳು, ರಾಜಕೀಯ ಮುಖಂಡರು ಹಾಗೂ ಸಾರ್ವಜನಿಕರ ಪ್ರವಾಹವೇ ಹರಿದುಬಂದಿತ್ತು. ಪಾರ್ಥಿನ ಶರೀದದ ಅಂತ್ಯಕ್ರಿಯೆಯನ್ನು ಸೋಮವಾರ ಮಧ್ಯಾಹ್ನ ಜುಬಿಲಿ ಹಿಲ್ಸ್‌ನ ರುದ್ರಭೂಮಿಯಲ್ಲಿ ನಡೆಸಲಾಯಿತು.
32 ವರ್ಷದ ಶ್ರೀನಿವಾಸ್ ಕುಚಿಭೋಟ್ಲಾ ಅವರನ್ನು ಅಮೆರಿಕದ ಕನ್ಸಾಸ್‌ನಲ್ಲಿ ಅಮೆರಿಕದ ನಿವೃತ್ತ ನೌಕಾದಳದ ಅಧಿಕಾರಿಯೊಬ್ಬ ಜನಾಂಗೀಯ ದ್ವೇಷದಿಂದ ಗುಂಡಿಕ್ಕಿ ಹತ್ಯೆಗೈದಿದ್ದ. ಘಟನೆಯಲ್ಲಿ ಕುಚಿಭೋಟ್ಲಾ ಅವರ ಭಾರತೀಯ ಸಹದ್ಯೋಗಿ ಅಲೋಕ ಮದಸಾನಿ ಹಾಗೂ ಹಂತಕನನ್ನು ಹಿಡಿಯಲು ಯತ್ನಿಸಿದ ಅಮೆರಿಕನ್ ಪ್ರಜೆ ಗಾಯಗೊಂಡಿದ್ದರು.