ತುಳು ಕಲಾವಿದರಿಗೆ ಜನರ ಪ್ರೋತ್ಸಾಹ ಅಗತ್ಯ; ನವೀನ್ ಡಿ ಪಡೀಲ್
ಅವಾರ್ಡ್ ವಿಜೇತ ತುಳು ಸಿನಿಮಾ ಕಲಾವಿದರಿಗೆ ಸನ್ಮಾನ

ಪುತ್ತೂರು, ಫೆ.28: ತುಳು ಭಾಷೆಯನ್ನು ಕೇವಲ ಹಾಸ್ಯ ಭಾಷೆ ಎಂದು ಪರಿಗಣಿಸುತ್ತಿವುದು ಮತ್ತು ಕೋಟಿಗಟ್ಟಲೆ ಖರ್ಚು ಮಾಡಿ ನಿರ್ಮಿಸಿದ ತುಳು ಸಿನೆಮಾಗಳನ್ನು ಕಾಮಿಡಿಯಾಗಿಲ್ಲ ಎಂದು ಹೇಳುತ್ತಿರುವುದು ಅತ್ಯಂತ ದುಖದ ವಿಚಾರವಾಗಿದೆ. ಜನರ ನಿರಂತರ ಪ್ರೋತ್ಸಾಹ ಇದ್ದರೆ ತುಳು ರಂಗಭೂಮಿ ಬೆಳೆಯಲು ಸಾಧ್ಯ ಎಂದು ತುಳು ರಂಗನಟ ನವೀನ್ ಡಿ ಪಡೀಲ್ ಹೇಳಿದರು.
ಅವರು ಕುಂಬ್ರ ಜಯಕರ್ನಾಟಕ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ವತಿಯಿಂದ ಕುಂಬ್ರ ಕಟ್ಟೆಯ ಬಳಿ ಸೋಮವಾರ ಸಂಜೆ ಮುಕ್ತ ಟಿವಿ ತುಳು ಸಿನೆಮಾ ಅವಾರ್ಡ್ ವಿಜೇತರಿಗೆ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ತುಳು ಕಲಾವಿದರಿಗೆ ಸಿನಿಮಾಲೋಕದಲ್ಲಿ ಸಾಕಷ್ಟು ಗೌರವ ಸಿಗುತ್ತಿಲ್ಲ. ತುಳು ಸಿನಿಮಾವನ್ನು ಜನ ಟಾಕೀಸಿಗೆ ಬಂದು ವೀಕ್ಷಣೆ ಮಾಡುತ್ತಿಲ್ಲ. ಕೋಟ್ಯಂತರ ರೂ ಖರ್ಚು ಮಾಡಿ ತುಳುನಾಡಿನ ಪರಂಪರೆಯನ್ನು ತೆರೆಯ ಮೇಲೆ ಬಿತ್ತರಿಸಬೇಕಾದರೆ ಅದರ ಹಿಂದೆ ಕಲಾವಿದರ ಅವಿರತ ಶ್ರಮ ಇದೆ ಎಂಬುದನ್ನು ಜನ ತಿಳಿದುಕೊಳ್ಳಬೇಕು. ಕಲಾವಿದನ ನೋವನ್ನು ಪ್ರತೀಯೊಬ್ಬ ತುಳುವರು ಅರ್ಥ ಮಾಡಿಕೊಳ್ಳಬೇಕು. 25 ವರ್ಷಗಳಿಂದ ತುಳು ಕಲಾವಿದನಾಗಿ ಕೆಲಸ ಮಾಡಿದ್ದೇನೆ ಇಲ್ಲಿಯವರೆಗೆ ಯಾರೂ ನಮ್ಮನ್ನು ಕರೆದು ಗೌರವ ಕೊಟ್ಟಿಲ್ಲ ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದರು.
ನಟ ಶಿವದ್ವಜ್ ಮಾತನಾಡಿ ಪ್ರತೀಯೊಬ್ಬ ತುಳುವರೂ ತುಳು ಕಲೆ, ಸಾಹಿತ್ಯ, ನಾಟಕ ಮತ್ತು ಸಿನಿಮಾ ಹಾಗೂ ಕಲಾವಿದರನ್ನು ಗೌರವಿಸಿ ಪ್ರೋತ್ಸಾಹಿಸಬೇಕು. ತುಳುವರು ಬೆಂಬಲ ನೀಡದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ತುಳು ಸಾಹಿತ್ಯಕ್ಕೆ ಅಪಾಯ ಎದುರಾಗಲಿದೆ. ನಟ ಸುಂದರ್ ರೈ ಮಂದಾರ ರಚಿಸಿರುವ ‘ಪನೊಡಾ ಬೊಡ್ಚತುಳು ಸಿನಿಮಾ ಹಿಟ್ ಹಾಗಿದ್ದರೂ ಜನ ಮಾತ್ರ ಅದನ್ನು ಅಷ್ಟಾಗಿ ಒಪ್ಪಿಕೊಂಡಿಲ್ಲ ಯಾಕೆ ಎಂಬುದು ನಮಗೆ ಅರ್ಥವಾಗಲಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಟ ಶಿವದ್ವಜ್, ನವೀನ್ ಡಿ ಪಡಿಲ್ ಹಾಗೂ ಸಂತೋಷ್ ರೈ ಪಾತಾಜೆಯವರನ್ನು ಸನ್ಮಾನಿಸಲಾಯಿತು.
ತಾಲೂಕು ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ಸನ್ಮಾನಿಸಿ ಮಾತನಾಡಿ ತುಳು ಭಾಷೆಗೆ ಉತ್ತಮ ಪರಂಪರೆ ಇದೆ , ಇಂದು ತುಳು ಉಳಿದುಕೊಂಡಿರುವುದು ಗ್ರಾಮೀಣ ಜನರಿಂದಾಗಿ, ಗ್ರಾಮೀಣ ಭಾಗದ ತುಳುವರು ಇಂದಿಗೂ ತುಳು ಭಾಷೆಯನ್ನೇ ಮಾತನಾಡುತ್ತಿರುವ ಕಾರಣ ನೈಜತೆಯನ್ನು ಉಳಿಸಿಕೊಂಡಿದೆ ಎಂದು ಹೇಳಿದರು.
ಜಯಕರ್ನಾಟಕ ಕುಂಬ್ರ ವಲಯ ಗೌರವಾಧ್ಯಕ್ಷ ಪುರಂದರ ರೈ ಮಿತ್ರಂಪಾಡಿ ಅಧ್ಯಕ್ಷತೆ ವಹಿಸಿದ್ದರು.
ತುಳು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಬಿ. ಚಂದ್ರಹಾಸ ರೈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ತುಳು ಅಕಾಡೆಮಿ ಸದಸ್ಯ ಕುಂಬ್ರ ದುರ್ಗಾಪ್ರಸಾದ್ ರೈ, ಒಳಮೊಗ್ರು ಗ್ರಾಪಂ ಅಧ್ಯಕ್ಷ ಯತಿರಾಜ್ ರೈ ನೀರ್ಪಾಡಿ, ಸಾಮಾಜಿಕ ಕಾರ್ಯಕರ್ತ ಪಿ ಎಂ ಅಬ್ದುಲ್‌ರಹಿಮಾನ್ ಅರಿಯಡ್ಕ, ಪುತ್ತೂರು ಅಶ್ವಿನಿ ಗ್ರೂಪ್ ಕರುಣಾಕರ್ ರೈ ದೇರ್ಲ, ಪುಷ್ಪರಾಜ್ ಹೆಗ್ಡೆ ಸತ್ತಿಕಲ್ಲು, ಇರ್ಷಾನ್ ಅಬೂಬಕ್ಕರ್, ಸೀತಾರಾಮ ರೈ ಕೈಕಾರ, ಉದ್ಯಮಿ ಗಣೇಸ್ ಕೋಡಿಬೈಲು, ಕುಂಬ್ರ ವಲಯ ಜಯಕರ್ನಾಟಕದ ಅಧ್ಯಕ್ಷ ಕರುಣಾ ರೈ ಬಿಜಲ ಉಪಸ್ಥಿತರಿದ್ದರು.
ರಂಗ ಕಲಾವಿದ ಸುಂದರ್ ರೈ ಮಂದಾರ ಸ್ವಾಗತಿಸಿ, ಸಿನಿಮಾ ಕಲಾಇದ ಚಿದಾನಂದ ಕಾಮತ್ ಕಾರ್ಯಕ್ರಮ ನಿರೂಪಿಸಿದರು.







