ಮೂಡುಬಿದಿರೆ : ದೈವಸ್ಥಾನ ಜಾಗದ ದಾಖಲೆಗಳ ಹಸ್ತಾಂತರ

ಮೂಡುಬಿದಿರೆ, ಫೆ.28: ಬಿರಾವು ಕರಿಂಜೆಯಲ್ಲಿರುವ ದೈವಸ್ಥಾನವೊಂದರ ದಾಖಲೆ ಪತ್ರಗಳ ನೋಂದಣಿ ಖರ್ಚನ್ನು ಮೂಡುಬಿದಿರೆ ಪುರಸಭೆಯ ಎಸ್‌ಸಿ/ಎಸ್‌ಟಿ ಅನುದಾನದಿಂದ ನೀಡಲಾಗಿದ್ದು, ದಾಖಲೆ ಪತ್ರಗಳ ಹಸ್ತಾಂತರವು ಮಂಗಳವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆಯಿತು.
ಶಾಸಕ ಅಭಯಚಂದ್ರ ಜೈನ್ ಅವರು ದಾಖಲೆಗಳನ್ನು ಹಸ್ತಾಂತರಿಸಿದರು.
ಕರಿಂಜೆ ಗ್ರಾಮದ ಬಿರಾವಿನಲ್ಲಿರುವ ಶ್ರೀ ಗುರುಬ್ರಹ್ಮ ಶ್ರೀ ಸತ್ಯಸಾರಮಾಣಿ ದೈವಗಳ ಮತ್ತು ಪಂಜುರ್ಲಿ ಗುಳಿಗ ದೈವಗಳ ಸೇವಾ ಸಮಿತಿಯು ತಮ್ಮ ದೈವಸ್ಥಾನಕ್ಕಾಗಿ 6.5 ಸೆಂಟ್ಸ್ ಜಾಗವನ್ನು ಗೊತ್ತುಪಡಿಸಿಕೊಂಡಿದ್ದರು. ಆ ಜಾಗವು ಹೊಸಂಗಡಿ ಅರಮನೆಯ ನಿವಾಸಿಯಾಗಿರುವ ಸಂಕಪ್ಪ ಶೆಟ್ಟಿ ಎಂಬವರ ವಶದಲ್ಲಿತ್ತು.
ದಲಿತ ಸಮುದಾಯದ ಮಂದಿ ಪೂಜಿಸಿಕೊಂಡು ಬಂದಿದ್ದ ಈ ದೈವಸ್ಥಾನದ ಅಭಿವೃದ್ಧಿಗಾಗಿ ಜಾಗದ ದಾಖಲೆ ಪತ್ರಗಳ ಅಗತ್ಯ ಸಮಿತಿಗಿತ್ತು. ಈ ಹಿನ್ನೆಲೆಯಲ್ಲಿ ಶಾಸಕ ಅಭಯಚಂದ್ರ ಅವರು ದೈವಸ್ಥಾನಕ್ಕಾಗಿ ಜಾಗ ನೀಡುವಂತೆ ಜಾಗದ ಮಾಲಕರ ಜೊತೆ ಮಾತುಕತೆ ನಡೆಸಿ, ಮಧ್ಯಸ್ಥಿಕೆ ವಹಿಸಿದ್ದರು. ಜಾಗದ ನೋಂದಣಿ ಖರ್ಚನ್ನು ಪುರಸಭೆಯ ಎಸ್‌ಸಿ ಎಸ್‌ಟಿ ಅನುದಾನದಿಂದ ಬಳಕೆ ಮಾಡುವಂತೆ ಸೂಚಿಸಲಾಗಿದ್ದು, ಇದೀಗ ದಲಿತ ಮುಖಂಡರ ಕೈಗೆ ದೈವಸ್ಥಾನದ ಜಾಗದ ದಾಖಲೆಗಳು ಸೇರಿವೆ.
ಶ್ರೀ ಗುರುಬ್ರಹ್ಮ ಶ್ರೀ ಸತ್ಯಸಾರಮಾಣಿ ದೈವಗಳ ಮತ್ತು ಪಂಜುರ್ಲಿ ಗುಳಿಗ ದೈವಗಳ ಸೇವಾ ಸಮಿತಿಯ ಆಡಳಿತ ಮೊಕ್ತೇಸರ ಹೊನ್ನಯ್ಯ ಅವರು ಶಾಸಕರಿಂದ ದಾಖಲೆ ಪತ್ರಗಳನ್ನು ಸ್ವೀಕರಿಸಿದರು. ನಂತರ ಮಾತನಾಡಿದ ಹೊನ್ನಯ್ಯ, ಶಾಸಕರ ಸಂಪೂರ್ಣ ಪ್ರಯತ್ನದಿಂದ ದೈವಸ್ಥಾನಕ್ಕೆ ದಾಖಲೆ ಪತ್ರಗಳು ಲಭ್ಯವಾಗಿದ್ದು, ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಬೇಕಿದೆಎಂದರು. ಮುಂದೆಯೂ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸುವುದಾಗಿ ಶಾಸಕರು ಭರವಸೆ ನೀಡಿದರು.
ಈ ದೈವಸ್ಥಾನಕ್ಕಾಗಿ ಅರಮನೆಯವರು ಜಾಗ ನೀಡುವ ಸಂದರ್ಭ 2 ಸೆಂಟ್ಸ್ ಉದಾರವಾಗಿ ನೀಡಿದ್ದು ಉಳಿದ 4.5 ಸೆಂಟ್ಸ್ ಜಾಗವನ್ನು ರಿಯಾಯಿತಿ ಬೆಲೆಯಲ್ಲಿ (ರೂ. 1.20ಲಕ್ಷ)ಯಲ್ಲಿ ಅರಮನೆಯವರು ನೀಡಿದ್ದಾರೆ. ಶಾಸಕ ಅಭಯಚಂದ್ರ, ಮಾಜಿ ಪುರಸಭಾ ಸದಸ್ಯ ಅನಿಲ್ ಲೋಬೋ ಹಾಗೂ ಹಾಲಿ ಪುರಸಭಾ ಸದಸ್ಯರು ಮತ್ತು ಇತರ ದಾನಿಗಳು ಉಳಿದ ಮೊತ್ತವನ್ನು ಭರಿಸಿದ್ದಾರೆ.
ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಮೂಡಾ ಮಾಜಿ ಅಧ್ಯಕ್ಷ ಸುರೇಶ್ ಕೋಟ್ಯಾನ್, ಪುರಸಭಾ ಅಧ್ಯಕ್ಷೆ ಹರಿಣಾಕ್ಷಿ ಸುವರ್ಣ, ಉಪಾಧ್ಯಕ್ಷ ವಿನೋದ್ ಸೆರಾವೋ, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಕೊರಗಪ್ಪ, ಪುರಸಭಾ ಸದಸ್ಯರಾದ ಪಿ.ಕೆ. ಥೋಮಸ್, ಎಮ್. ರತ್ನಾಕರ ದೇವಾಡಿಗ, ಅಬ್ದುಲ್ ಬಶೀರ್, ಮೂಡುಬಿದಿರೆ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ, ಪುರಸಭಾ ಸದಸ್ಯೆ ಸುಪ್ರಿಯಾ ಡಿ. ಶೆಟ್ಟಿ, ನಾಮನಿರ್ದೇಶಿತ ಸದಸ್ಯರಾದ ಉಮೇಶ್ ದೇವಾಡಿಗ, ಇಕ್ಬಾಲ್ ಕರೀಮ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಪ್ರೇಮನಾಥ ಮಾರ್ಲ, ಎಪಿಎಂಸಿ ಸದಸ್ಯ ಚಂದ್ರಹಾಸ ಸನಿಲ್ ಮತ್ತಿತರರು ಉಪಸ್ಥಿತರಿದ್ದರು.







