ಕಾಂಗ್ರೆಸ್-ಬಿಜೆಪಿ ಸಿಡಿ: ಸುಪ್ರೀಂಕೋರ್ಟ್ ನ್ಯಾಯಾಧೀಶರಿಂದ ತನಿಖೆಗೆ ಐವನ್ ಒತ್ತಾಯ

ಮಂಗಳೂರು, ಫೆ.28: ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಇತ್ತೀಚಿನ ಸಿಡಿ ವಿಚಾರ, ಗೋವಿಂದರಾಜು ಡೈರಿ, ಸಹರಾ ಡೈರಿ, ಲೆಹರ್‌ಸಿಂಗ್ ಡೈರಿ ಸಹಿತ ಭ್ರಷ್ಟಾಚಾರಗಳ ಬಗ್ಗೆ ಸುಪ್ರೀಂ ಕೋರ್ಟ್‌ನ ಹಾಲಿ ಅಥವಾ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾಗಲಿ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಒತ್ತಾಯಿಸಿದರು.
ಮಂಗಳವಾರ ತನ್ನ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಲು ವಿಫಲರಾಗಿರುವ ಬಿಜೆಪಿ ಪಕ್ಷವು ರಾಜ್ಯ ಸರಕಾರವನ್ನು ಉರುಳಿಸಲು ಐಟಿ ಇಲಾಖೆ ಮತ್ತು ಜಾರಿ ನಿರ್ದೇಶನಾಲಯದ ಮೂಲಕ ಸಂಚು ನಡೆಸುತ್ತಿದೆ ಎಂದು ಆರೋಪಿಸಿದರಲ್ಲದೆ, ಬಿಜೆಪಿಯ ಈ ಸಂಚನ್ನು ಸಮರ್ಪಕವಾಗಿ ಎದುರಿಸಲು ಕಾಂಗ್ರೆಸ್ ಸಿದ್ಧವಾಗಿದ್ದು, ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತಿತರರು ಕಾಂಗ್ರೆಸ್ ಸರಕಾರವನ್ನು ಉರುಳಿಸುವ ಉದ್ದೇಶದಿಂದಲೇ ಭ್ರಷ್ಟಾಚಾರದ ಆರೋಪ ಹೊರಿಸುತ್ತಿದ್ದಾರೆ. ಅದಕ್ಕಾಗಿ ಐಟಿ ದಾಳಿ, ಡೈರಿ ವಿಚಾರಗಳನ್ನು ಪ್ರಸ್ತಾಪಿಸಿ ಮುಖ್ಯಮಂತ್ರಿಯನ್ನು ಜೈಲಿಗೆ ಕಳುಹಿಸುವುದಾಗಿ ಹೇಳುತ್ತಿದ್ದಾರೆ. ಮುಖ್ಯಮಂತ್ರಿಯ ಭ್ರಷ್ಟಾಚಾರ ನಡೆಸಿದ್ದರೆ ಕನಿಷ್ಠ 1 ದಾಖಲೆ ಬಿಡುಗಡೆ ಮಾಡಲಿ ಎಂದು ಸವಾಲೆಸೆದರು.
2013ರಲ್ಲಿ ಲೆಹರ್‌ಸಿಂಗ್ ಅಡ್ವಾಣಿಗೆ ಬರೆದಿರುವ ಭ್ರಷ್ಟಾಚಾರದ ಕುರಿತ ಪತ್ರ ನಕಲಿಯಾ? ಮುಖ್ಯಮಂತ್ರಿಯೇ ಐಟಿ ಇಲಾಖೆಗೆ ಪತ್ರ ಬರೆದು ವಿವರ ಕೇಳಿದಾಗ ಇಲಾಖೆಯು ಮಾಹಿತಿ ನೀಡಲು ನಿರಾಕರಿಸಿದೆ. ಹೀಗಿರುವಾಗ ಗೋವಿಂದರಾಜು ಕುರಿತಾಗಿನ ದಾಖಲೆಪತ್ರಗಳು ಬಿಜೆಪಿಗರಿಗೆ ಹೇಗೆ ದೊರೆತವು ಎಂದು ಪ್ರಶ್ನಿಸಿದ ಐವನ್, ಯಡಿಯೂರಪ್ಪಮತ್ತು ಅನಂತ್ ಕುಮಾರ್‌ರ ಸಂಭಾಷಣೆಯ ಸಿಡಿಯು ಪಿತೂರಿಯ ಒಂದು ಭಾಗ ಎಂದು ಆರೋಪಿಸಿದರು.
ಪರಿಹಾರ ನಿಧಿ ಈ ಸಂದರ್ಭ ವಿವಿಧ ಕಾಯಿಲೆಗಳಿಂದ ಬಳಲುವ ಕೋಲಾರದ ದೊಡ್ಡ ವೆಂಕಟ ಸ್ವಾಮಿಗೆ 1 ಲಕ್ಷ ರೂ., ಬಂಟ್ವಾಳದ ರೋಶನ್ ಫೆರಾವೋಗೆ 60 ಸಾವಿರ ರೂ., ನೆಪೀಸಾ ಬಜಾಲ್ 60 ಸಾವಿರ ರೂ., ಪಾವೂರಿನ ರುಫೀನಾ ಬ್ರಾಗ್ಸ್‌ಗೆ 48,005 ರೂ., ಜೆಪ್ಪು ಕಂಕನಾಡಿಯ ಮುಹಮ್ಮದ್ ಅಶ್ರಫ್ 40 ಸಾವಿರ ರೂ., ಬಜಾಲ್‌ನ ಶಾರದಾರಿಗೆ 10,789 ರೂ. ಚೆಕ್ಕುಗಳನ್ನು ಐವನ್ ಡಿಸೋಜ ಹಸ್ತಾಂತರಿಸಿದರು.







