ಮಂಗಳೂರು: ಉದ್ದಿಮೆ ಪರವಾನಿಗೆ ಶುಲ್ಕದೊಂದಿಗೆ ವಿಧಿಸುವ ಘನತ್ಯಾಜ್ಯ ಉಪಕರ ಪರಿಷ್ಕರಣೆ

ಮಂಗಳೂರು, ಫೆ. 28: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಉದ್ದಿಮೆ ಪರವಾನಿಗೆ ಶುಲ್ಕದೊಂದಿಗೆ ವಿಧಿಸಲಾಗುತ್ತಿರುವ ಘನತ್ಯಾಜ್ಯ ಉಪಕರವು ಅವೈಜ್ಞಾನಿಕ ಹಾಗೂ ಅಸಮಂಜಸವಾಗಿರುವುದರಿಂದ ದರ ಪರಿಷ್ಕರಣೆಗೆ ಇಂದು ಮನಪಾ ಸಾಮಾನ್ಯ ಸಭೆಯಲ್ಲಿ ವಿಪಕ್ಷದ ಆಕ್ಷೇಪದೊಂದಿಗೆ ಮಂಜೂರಾತಿ ನೀಡಲಾಯಿತು.
ಪಾಲಿಕೆ ವ್ಯಾಪ್ತಿಯಲ್ಲಿ ಘನತ್ಯಾಜ್ಯ ಉತ್ಪಾದನೆಗೆ ಅನುಗುಣವಾಗಿ ಪರಿಷ್ಕೃತ ಉಪಕರವನ್ನು ವಸತಿ, ವಾಣಿಜ್ಯ ಹಾಗೂ ವಾಣಿಜ್ಯೇತರ ಕಟ್ಟಡಗಳಿಗೆ ಪ್ರತ್ಯೇಕವಾಗಿ 2017-18ನೇ ಸಾಲಿನಿಂದ ಉದ್ದಿಮೆ ಪರವಾನಿಗೆ ಶುಲ್ಕದೊಂದಿಗೆ ಪಡೆಯಲು ನಿರ್ಧರಿಸಲಾಗಿತ್ತು.
ಮೇಯರ್ ಹರಿನಾಥ್ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭಯಲ್ಲಿ, ಮನಪಾ ಮುಖ್ಯಸಚೇತಕ ಶಶಿಧರ ಹೆಗ್ಡೆಯವರು ಈ ಕುರಿತ ಅಜೆಂಡಾ ಮಂಡನೆ ಮಾಡಿ, ಉದ್ದಿಮೆದಾರರಲ್ಲಿ ಘನತ್ಯಾಜ್ಯ ವಿಲೇವಾರಿ ಉಪಕರವನ್ನು ಪರಿಷ್ಕರಿಸುವ ಕುರಿತು ಇರುವ ಗೊಂದಲ ಹಾಗೂ ದರ ಹೆಚ್ಚಳದಿಂದ ಪಾಲಿಕೆ ಉದ್ದಿಮೆ ಪರವಾನಿಗೆ ಶುಲ್ಕ ವಸೂಲಾತಿಯಲ್ಲಿ ಭಾರೀ ಇಳಿಕೆ ಗಮನಿಸಿ ಪಾಲಿಕೆ ಆರ್ಥಿಕ ನಷ್ಟವನ್ನು ತಪ್ಪಿಸಲು ಉಪಕರವನ್ನು ಪರಿಷ್ಕರಿಸಲಾಗಿರುವುದಾಗಿ ವಿವರ ನೀಡಿದರು.
ಫೆ.28ರೊಳಗೆ ದಂಡ ರಹಿತವಾಗಿ ಉದ್ದಿಮೆ ಪರವಾನಿಗೆ ನವೀಕರಣಕ್ಕೆ ವಿಧಿಸಲಾಗಿರುವ ಗಡುವನ್ನು ವಿಸ್ತರಿಸಿ, ಮಾರ್ಚ್ 31ರವರೆಗೆ ದಂಡ ದಂಡರಹಿತವಾಗಿ ಉದ್ದಿಮೆ ಪರವಾನಿಗೆ ನವೀಕರಿಸಲು ಅವಕಾಶ ನೀಡಲಾಗುವುದು ಎಂದರು.
ಆದರೆ ಕಾರ್ಯಸೂಚಿಯಲ್ಲಿ ಮಂಡಿಸಲಾಗಿರುವ ದರ ಪರಿಷ್ಕರಣೆ ಪಟ್ಟಿಯಲ್ಲಿರುವ ಕ್ಯಾಂಟೀನು, ಕ್ಯಾಟರಿಂಗ್ ಉದ್ಯಮ ಸೇರಿದಂತೆ ಕೆಲ ಉದ್ಯಮಗಳಿಗೆ ವಿಧಿಸಲಾಗಿರುವ ದರಗಳನ್ನು ಮರು ಪರಿಷ್ಕರಣೆ ಮಾಡುವ ಅಗತ್ಯವಿದೆ ಎಂದು ವಿಪಕ್ಷ ಸದಸ್ಯರು ಆಕ್ಷೇಪ ವ್ಯಕ್ತಪಡಿಸುವುದರೊಂದಿಗೆ ದರ ಪರಿಷ್ಕರಣೆಗೆ ಒಪ್ಪಿಗೆ ನೀಡಲಾಯಿತು.







