ಈಜಲು ಹೋದ ಇಬ್ಬರು ಮುಳುಗಿ ಸಾವು
ದುಬಾರೆಯ ಪ್ರವಾಸಿ ಕೇಂದ್ರದ ಬಳಿ ಘಟನೆ
ಮಡಿಕೇರಿ, ಫೆ.28 : ದುಬಾರೆ ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.
ಕಂಬಿಬಾಣೆ ಗ್ರಾಮದ ಗಿರೀಶ (23) ಹಾಗೂ ದುರ್ಗಾಪ್ರಸಾದ್ (22) ಎಂಬವರು ಮೃತಪಟ್ಟ ದುರ್ದೈವಿಗಳು.
ಗಾರೆ ಕೆಲಸ ಮಾಡುತ್ತಿದ್ದ ನಾಲ್ವರು ಯುವಕರು ಬೈಕ್‌ಗಳಲ್ಲಿ ದುಬಾರೆಯ ಪ್ರವಾಸಿ ಕೇಂದ್ರದ ನದಿಯಲ್ಲಿ ಈಜಲು ತೆರಳಿದ ಸಂದರ್ಭ ಈ ದುರ್ಘಟನೆ ನಡೆದಿದೆ.
ದುಬಾರೆ ಪ್ರವಾಸಿ ಕೇಂದ್ರದ ಗುತ್ತಿಮಠ ಎಂಬಲ್ಲಿ ನದಿಗೆ ಇಳಿದ ಸಂದರ್ಭ ಇಬ್ಬರು ನೀರಿನಲ್ಲಿ ಮುಳುಗಿದ್ದು, ಮಾಹಿತಿ ತಿಳಿದ ಕುಶಾಲನಗರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಂಡಿದ್ದಾರೆ.
ಮೃತ ಗಿರೀಶ ವಿವಾಹಿತರಾಗಿದ್ದು, ಪತ್ನಿಯನ್ನು ಅಗಲಿದ್ದಾರೆ. ದುರ್ಗಾ ಪ್ರಸಾದ್ ಅವಿವಾಹಿತರು ಎಂದು ತಿಳಿದು ಬಂದಿದೆ. ಪೊಲೀಸರು ಮುಳುಗು ತಜ್ಞರ ಸಹಾಯದಿಂದ ಮೃತ ದೇಹಗಳನ್ನು ಹೊರ ತೆಗೆಯಲಾಯಿತು ಎಂದು ತಿಳಿದು ಬಂದಿದ್ದು, ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





