ಚಿಕ್ಕಮಗಳೂರು ಕಾಡಿನಲ್ಲಿ ಮಂಗಗಳ ಸರಣಿ ಸಾವು
ಮಂಗನ ಕಾಯಿಲೆಯ ಆತಂಕದಲ್ಲಿ ಜನತೆ

ಚಿಕ್ಕಮಗಳೂರು, ಫೆ.28: ಕಾಫಿ ನಾಡು ಖ್ಯಾತಿಯ ಚಿಕ್ಕಮಗಳೂರು ಜಿಲ್ಲೆಗೆ ಮಂಗನ ಕಾಯಿಲೆ ಹರಡಿದೆಯೇ ಎನ್ನುವ ಅನುಮಾನ ಹುಟ್ಟಿಕೊಂಡಿದೆ. ಗಿರಿ-ಕಣಿವೆಗಳಲ್ಲಿ, ಕಾಫಿ ತೋಟಗಳಲ್ಲಿ ಹಿಂಡು, ಹಿಂಡು ಮಂಗಗಳು ಅಲ್ಲಲ್ಲಿ ಸಾವನ್ನಪ್ಪಿದ್ದು, ಹೀಗೊಂದು ದಟ್ಟ ಅನುಮಾನಗಳಿಗೆ ಮೂಲ ಕಾರಣವಾಗಿದೆ.
ಮಂಗನ ಕಾಯಿಲೆ ಶಿವಮೊಗ್ಗದ ತೀರ್ಥಹಳ್ಳಿ, ಬೆಳಗಾವಿಯ ಖಾನಾಪುರದಲ್ಲಿ ಕಂಡು ಬಂದಿರುವ ಬಗ್ಗೆ ಈತನಕ ಸುದ್ದಿಯಾಗಿತ್ತು.
ಆದರೆ ಈ ಬಾರಿ ಚಿಕ್ಕಮಗಳೂರು ಜಿಲ್ಲೆಯ ಕಾಫಿ ತೋಟಗಳ ಕೂಲಿ ಲೈನುಗಳಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು ಕಳೆದೊಂದು ವಾರದಿಂದ ಮೈ-ಕೈ ನೋವು, ಜ್ವರ, ತಲೆನೋವಿನಿಂದ ಬಳಲುತ್ತಿರುವ ಮಾಹಿತಿ ಇದೆ. ಇದು ಮಂಗನ ಕಾಯಿಲೆಯ ಮುನ್ಸೂಚನೆಯೇ ಎಂದು ಗ್ರಾಮೀಣ ಭಾಗದ ಜನ ಆತಂಕಕ್ಕೀಡಾಗಿದ್ದಾರೆ.
ಈ ಕಾಯಿಲೆ ಚಿಕ್ಕಮಗಳೂರಿಗೂ ಕಾಲಿಟ್ಟಿರುವ ಲಕ್ಷಣಗಳು ಕಂಡು ಬಂದಿವೆ. ಚಿಕ್ಕಮಗಳೂರು ತಾಲೂಕಿನ ದಾಸರಹಳ್ಳಿ ಬಳಿಯ ಬೈನೇಕೂಲ್ ಎಸ್ಟೇಟ್, ಮುಳ್ಳಯ್ಯನಗಿರಿ ಸಮೀಪದ ಕಾಫಿತೋಟ ಹಾಗೂ ಗಿರಿಭಾಗದ ತೋಟಗಳಲ್ಲಿ ಅಲ್ಲಲ್ಲಿ ಮಂಗಗಳ ಹಿಂಡು ಸಾವನ್ನಪ್ಪಿದೆ. ಇದರಿಂದ ಗಿರಿಭಾಗದಲ್ಲಿ ವಾಸಿಸುವ ಜನರು ತೀವ್ರ ಭೀತಿಗೊಂಡಿದ್ದಾರೆ.
ಸಾಮಾನ್ಯವಾಗಿ ಮಂಗನ ಕಾಯಿಲೆ ಬೇಸಿಗೆಯಲ್ಲಿ ಹರಡುತ್ತದೆ. ಮಂಗಗಳು ಇದ್ದಕ್ಕಿ ದ್ದಂತೆ ಸಾಯುತ್ತವೆ. ಇದರ ವೈರಾಣುಗಳು ಮನುಷ್ಯನಿಗೂ ಹರಡಿ ಮನುಷ್ಯ ತಲೆನೋವು, ಕೆಮ್ಮು, ಜ್ವರದಿಂದ ಬಳಲಿ ಸಾಯುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.
ಕೂಲಿ ಕಾರ್ಮಿಕರು ಕಳೆದೊಂದು ವಾರ ದಿಂದಲೂ ತಲೆನೋವು, ಜ್ವರ, ಕೆಮ್ಮಿನಿಂದ ಬಳಲುತ್ತಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಮಳೆ ಇಲ್ಲದೆ ಕಾಫಿಯೂ ಸಂಪೂರ್ಣ ನಾಶವಾಗಿದ್ದು, ಮಂಗಗಳು ಸತ್ತ ಬಳಿಕ ವಾಸನೆಯ ಮೂಲಕವಷ್ಟೇ ಸಾವಿನ ಸ್ಪಷ್ಟತೆಸಿಗುತ್ತಿದೆ. ಸ್ಥಳಕ್ಕೆ ಬಂದ ವೈದ್ಯರು ಮಂಗಗಳ ಮೈಮೇಲಿನ ಕೂದಲು ಉದುರಿಲ್ಲ. ಲೈನ್‌ಗಳಲ್ಲಿ ವಾಸ ಮಾಡುವ ಜನ ಕಾಯಿಲೆಯಿಂದ ಬಳಲುತ್ತಿದ್ದಾರೆ. ಮಾರಕ ಕಾಯಿಲೆ ಬರುವ ಸೂಚನೆಗಳಿದ್ದರೆ ಅವರ ರಕ್ತದ ಮಾದರಿಗಳನ್ನು ಲ್ಯಾಬ್‌ಗೆ ಕಳುಹಿಸಿ, ವರದಿ ಬಂದ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳುತ್ತಾರೆ.
ಇಂದಿನ ಬೆಳೆವಣಿಗೆಗಳನ್ನು ಗಮನಿಸಿದರೆ ಕಾಫಿನಾಡಿನ ಇತಿಹಾಸದಲ್ಲಿ ಜನ ಮಂಗನ ಕಾಯಿಲೆ ಹೆಸರನ್ನೇಕೇಳಿರಲಿಲ್ಲ. ಆದರೆ ಭೀಕರ ಬರಗಾಲಕ್ಕೆ ತುತ್ತಾಗಿರುವ ಕಾಫಿ ನಾಡಿಗೆ ಕಾಲಿಟ್ಟಿದ್ದರೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ.
ಇಲ್ಲಿನ ಪರಿಸ್ಥಿತಿ, ವೈದ್ಯರ ಹೇಳಿಕೆ ಗಮನಿಸಿ ದರೆ ಇದು ನಿಜಕ್ಕೂ ಮಂಗನ ಕಾಯಿಲೆ ಇರಬಹುದೇ ಎನ್ನುವ ಅನುಮಾನ ಹುಟ್ಟಿಸುತ್ತದೆ. ಹೊಟ್ಟೆಪಾಡಿಗಾಗಿ ಎಲ್ಲಿಂದಲೋ ಬಂದು ಬದುಕು ಕಟ್ಟಿಕೊಂಡಿರುವ ಮಂದಿ ಹೆಚ್ಚಿದ್ದಾರೆ. ಇದು ಮಂಗನ ಕಾಯಿಲೆ ಆಗದಿದ್ದರೆ ಸಾಕು ಎನ್ನುವುದು ಜನರ ಹೆಬ್ಬಯಕೆ.







