ಉಡುಪಿ: ಬೀಡಿ ಮಾಲಕರ ವಿರುದ್ಧ ಪ್ರತಿಭಟನೆಗೆ ನಿರ್ಧಾರ

ಉಡುಪಿ, ಫೆ.28: 2015ರ ಎ.1ರಿಂದ ಈವರೆಗೆ ಸಾವಿರ ಬೀಡಿಗೆ ಬಡ ಬೀಡಿ ಕಾರ್ಮಿಕರಿಗೆ 12.75ರೂ.ನಂತೆ ಸಾವಿರಾರು ರೂಪಾಯಿ ತುಟ್ಟಿ ಭತ್ಯೆ ಬಾಕಿ ಇರಿಸಿಕೊಂಡಿರುವ ಬೀಡಿ ಮಾಲಕರ ವಿರುದ್ಧ ಪ್ರತಿಭಟನೆ ನಡೆಸಲು ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಶನ್ ನಿರ್ಧರಿಸಿದೆ.
ರಾಜ್ಯ ಸರಕಾರ 2015ರ ಎ.1ರಿಂದ 2016ರ ಎ.1ರವರೆಗಿನ ತುಟ್ಟಿಭತ್ಯೆ ಯನ್ನು ತಡೆಹಿಡಿಯಲು ಆದೇಶ ಹೊರಡಿಸಿತ್ತು. ಹೈಕೋರ್ಟ್ ಸರಕಾರದ ಆದೇಶವನ್ನು ರದ್ದುಗೊಳಿಸಿ ತೀರ್ಪು ನೀಡಿತ್ತು. ಅಂದರೆ 2015ರ ಎ.1ರಿಂದ ಹಿಂತೆಗೆದುಕೊಂಡಿದ್ದ ಸಾವಿರ ಬೀಡಿಗೆ 12.75ರೂ. ತುಟ್ಟಿಭತ್ಯೆಯನ್ನು ನೀಡ ಬೇಕೆಂದು ತೀರ್ಪು ನೀಡಿತ್ತು. ಆದರೆ ಬೀಡಿ ಮಾಲಕರು ಹೈಕೋರ್ಟ್ ತೀರ್ಪು ಜಾರಿ ಮಾಡಿಲ್ಲ ಎಂದು ಫೆಡರೇಶನ್ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಫೆ.27ರಂದು ಎಲ್ಲಾ ಬೀಡಿ ಡಿಪೋಗಳಿಗೆ ಫೆಡರೇಶನ್ ನಿಯೋಗ ತೆರಳಿ ಮನವಿ ನೀಡಿದೆ. ಇನ್ನು 15 ದಿನಗಳಲ್ಲಿ ಬಾಕಿಯನ್ನು ನೀಡ ದಿದ್ದಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಲು ನಿರ್ಧರಿಸಲಾಗಿದೆ. ಕಾರ್ಮಿಕ ಇಲಾಖೆಗೂ ಮನವಿ ಸಲ್ಲಿಸಿ ಈ ಸಂಬಂಧ ಮಧ್ಯಪ್ರವೇಶಿಸುವಂತೆ ಕೋರಲಾಗಿದೆ.
ಅದೇ ರೀತಿ ಕಾರ್ಮಿಕ ಮಂತ್ರಿಗಳಿಗೂ ಮನವಿ ಸಲ್ಲಿಸಲಾಗಿದೆ. ಬೀಡಿ ಡಿಪೋಗಳಿಗೆ ಭೇಟಿ ನೀಡಿದ ನಿಯೋಗದಲ್ಲಿ ಜಿಲ್ಲಾಧ್ಯಕ್ಷ ಮಹಾ ಬಲ ವಡೇರಹೋಬಳಿ, ಕಾರ್ಯದರ್ಶಿ ಲಕ್ಷ್ಮಣ ಕಾಪು, ಮುಖಂಡರಾದ ಉಮೇಶ್ ಕುಂದರ್, ವಿಠಲ ಪೂಜಾರಿ, ಬಲ್ಕೀಸ್, ನಳಿನಿ, ಗಿರಿಜ, ಸುಗಂಧಿ, ಪ್ರೇಮಲತಾ, ಯಶೋಧ, ಭವಾನಿ, ಕವಿರಾಜ್ ಮೊದಲಾದವರು ಉಪಸ್ಥಿತರಿದ್ದರು.







