ಶಾಲೆಯ ಮುಂಭಾಗ ಹರಿದು ಬಿದ್ದ ವಿದ್ಯುತ್ ತಂತಿ: ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು,

ಶಿವಮೊಗ್ಗ, ಫೆ. 28: ಶಾಲೆಯ ಮುಂಭಾಗ ಹಾದು ಹೋಗಿದ್ದ ವಿದ್ಯುತ್ ತಂತಿಯೊಂದು ತುಂಡರಿಸಿ ಬಿದ್ದ ಘಟನೆ ಮಂಗಳವಾರ ಬೆಳಗ್ಗೆ ಜಿಲ್ಲೆಯ ಹೊಸನಗರ ತಾಲೂಕಿನ ತ್ರಿಣಿವೆ ಗ್ರಾಮದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದಿದೆ.
ಮಕ್ಕಳು ಶಾಲೆಗೆ ಆಗಮಿಸುವುದಕ್ಕೂ ಮುನ್ನವೇ ಈ ಘಟನೆ ನಡೆದಿರುವುದರಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ತಪ್ಪಿದೆ. ವಿದ್ಯುತ್ ತಂತಿ ಹರಿದು ಬಿದ್ದಿರುವುದನ್ನು ಗಮನಿಸಿದ ಗ್ರಾಮಸ್ಥರು ಶಿಕ್ಷಣ ಇಲಾಖೆ ಹಾಗೂ ಮೆಸ್ಕಾಂಗೆ ಸುದ್ದಿ ಮುಟ್ಟಿಸಿದ್ದಾರೆ. ವಿದ್ಯುತ್ ತಂತಿ ಹರಿದು ಬಿದ್ದಿದ್ದ ಸ್ಥಳಕ್ಕೆ ವಿದ್ಯಾರ್ಥಿಗಳು ಹೋಗದಂತೆ ಮುನ್ನೆಚ್ಚರಿಕೆ ವಹಿಸಿಸಿದ್ದಾರೆ.
ಇನ್ನೊಂದೆಡೆ ಮೆಸ್ಕಾಂನವರು ಸಕಾಲಕ್ಕೆ ಸ್ಥಳಕ್ಕೆ ಆಗಮಿಸದಿದ್ದನ್ನು ಖಂಡಿಸಿ ಹಾಗೂ ಶಾಲೆಯ ಮುಂಭಾಗ ಹಾದು ಹೋಗಿರುವ ವಿದ್ಯುತ್ ಲೈನ್ ಮತ್ತು ಮೈದಾನದಲ್ಲಿರುವ ಹಳೇಯ ಟ್ರಾನ್ಸ್‌ಫಾರ್ಮರ್ ಸ್ಥಳಾಂತರಿಸಬೇಕೆಂದು ಆಗ್ರಹಿಸಿ ಪೋಷಕರು ಹಾಗೂ ವಿದ್ಯಾರ್ಥಿಗಳು ಶಾಲೆಯ ಮುಂಭಾಗ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಹೊಸನಗರ ಕ್ಷೇತ್ರ ಶಿಕ್ಷಣಾಧಿಕಾರಿ ವೀರಭದ್ರಪ್ಪ, ಮೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಮೆಸ್ಕಾಂನವರು ವಿದ್ಯುತ್ ಲೈನ್ ಸ್ಥಳಾಂತರಿಸುವ ಭರವಸೆಯಿತ್ತ ನಂತರ ಪೋಷಕರು ಪ್ರತಿಭಟನೆ ಹಿಂಪಡೆದಿದ್ದಾರೆ.
ಅಪಾಯಕಾರಿ ಸ್ಥಿತಿಯಲ್ಲಿದೆ: ಶಾಲೆಯ ಮುಂಭಾಗದಲ್ಲಿಯೇ ವಿದ್ಯುತ್ ಲೈನ್ ಹಾದು ಹೋಗಿದ್ದು, ಮೈದಾನದಲ್ಲಿ ಹಳೇಯ ಟ್ರಾನ್ಸ್‌ಫಾರ್ಮರ್ ಕೂಡ ಇದ್ದು ಅಪಾಯಕಾರಿ ಸ್ಥಿತಿಯಲ್ಲಿದೆ. ಶಾಲೆಯ ಆವರಣದಲ್ಲಿರುವ ತೆಂಗಿನ ಮರಗಳ ಗರಿಗಳು ಬೀಳುವುದರಿಂದ ವಿದ್ಯುತ್ ಲೈನ್‌ಗೆ ಹಾನಿಯಾಗುತ್ತಿದೆ. ಹಿಂದೊಮ್ಮೆ ಕೂಡ ವಿದ್ಯುತ್ ತಂತಿ ಹರಿದು ಬಿದ್ದಿತ್ತು.
ಆದರೆ ಇಲ್ಲಿಯವರೆಗೂ ಮೆಸ್ಕಾಂನವರು ವಿದ್ಯುತ್ ಲೈನ್ ಹಾಗೂ ಟ್ರಾನ್ಸ್‌ಫಾರ್ಮರ್ ತೆರವುಗೊಳಿಸುವ ಗೋಜಿಗೆ ಹೋಗಿಲ್ಲ. ಮಂಗಳವಾರ ಬೆಳಿಗ್ಗೆ ಮತ್ತೆ ವಿದ್ಯುತ್ ಲೈನ್ ತುಂಡರಿಸಿ ಶಾಲೆಯ ಆವರಣದಲ್ಲಿ ಬಿದ್ದಿದೆ. ಆದರೆ ಈ ವೇಳೆ ಇನ್ನೂ ಶಾಲೆ ಆರಂಭವಾಗದ ಕಾರಣದಿಂದ ಯಾವುದೇ ಅನಾಹುತವಾಗಿಲ್ಲ. ಒಂದು ವೇಳೆ ಮಕ್ಕಳಿದ್ದ ವೇಳೆ ಈ ಘಟನೆ ನಡೆದಿದ್ದರೆ ದೊಡ್ಡ ಅನಾಹುತ ಸಂಭವಿಸುತ್ತಿದ್ದುದು ನಿಜವಾಗಿದೆಎಂದು ಸ್ಥಳೀಯರು ಹೇಳುತ್ತಾರೆ.
ಇನ್ನಾದರೂ ಮೆಸ್ಕಾಂನವರು ಶಾಲಾ ಆವರಣದಲ್ಲಿ ಹಾದು ಹೋಗಿರುವ ವಿದ್ಯುತ್ ಲೈನ್, ಕಂಬ ಹಾಗೂ ಟ್ರಾನ್ಸ್‌ಫಾರ್ಮರ್ ತೆರವುಗೊಳಿಸಲು ಕ್ರಮಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಧೋರಣೆ ಅನುಸರಿಸಬಾರದು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.







