ಕಾಫು ಪುರಸಭೆ ಪ್ರಥಮ ಸ್ಥಾನದಲ್ಲಿದೆ; ಶಾಸಕವಿನಯಕುಮಾರ್ ಸೊರಕೆ

ಕಾಪು: ಕಾಪು ಪುರಸಭೆ ಪ್ರಥಮ ಸ್ಥಾನದಲ್ಲಿದ್ದು, ಅದನ್ನು ನಿರಂತರವಾಗಿ ಕಾಯ್ದುಕೊಳ್ಳಬೇಕು ಎಂದು ಶಾಸಕ ವಿನಯಕುಮಾರ್ ಸೊರಕೆ ಹೇಳಿದರು.
ಮಂಗಳವಾರ ನಡೆದ ಕಾಪು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಹೊಸದಾಗಿ ರಚನೆಯಾದ ಪುರಸಭೆಯಲ್ಲಿ ಆದಾಯ ಬರುವಂತೆ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಯೋಜನೆ ಹಾಕಿಕೊಳ್ಳಿ. ಹಸಿರು ಕಾಪು ನಿರ್ಮಾಣಕ್ಕಾಗಿ ಅರಣ್ಯ ಹಾಗೂ ತೋಟಗಾರಿಕಾ ಇಲಾಖೆಯೊಂದಿಗೆ ಮಾತುಕತೆ ನಡೆಸಲಾಗಿದ್ದು, ಅದಕ್ಕೆ ಬೇಕಾದ ಎಲ್ಲಾ ರೀತಿಯ ಯೋಜನೆಗಳನ್ನು ರೂಪಿಸುವಂತೆ ಪುರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಜ್ಯ ಮಟ್ಟದಲ್ಲಿಯೂ ಕಾಪು ಪುರಸಭೆಯನ್ನು ಮಾದರಿಯಾಗಿ ಪರಿಗಣಿಸಿದ್ದು, ಪುರಸಭಾ ವ್ಯಾಪ್ತಿಯ ಸಮಗ್ರ ಭೌಗೋಳಿಕ ನಕ್ಷೆಯನ್ನು ಸಿದ್ದಪಡಿಸಲು ಕ್ರಮವಹಿಸಲಾಗಿದೆ. ಉಳಿಯಾರಗೋಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಸಮುದಾಯ ಭವನ ನಿರ್ಮಾಣ, ವ್ಯವಸ್ಥಿತ ಮಾರುಕಟ್ಟೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಅಲ್ಲದೆ ಈಗಾಗಲೇ ಪುರಸಭಾ ವ್ಯಾಪ್ತಿಯಲ್ಲಿ ಸುಮಾರು ರೂ. 50 ಕೋಟಿಗೂ ಅಧಿಕ ಮೊತ್ತದ ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿವೆ. ಕಾಮಗಾರಿಯ ಗುಣಮಟ್ಟಕ್ಕೆ ಆದ್ಯತೆ ನೀಡಲಾಗುತ್ತದೆ. ದ್ವಿಪಥ ಹಾಗೂ ಸಂಪರ್ಕ ರಸ್ತೆಗಳ ನಿರ್ಮಾಣಕ್ಕೆ ಜನ ಸಹಕಾರ ನೀಡಬೇಕು ಎಂದರು.
ಶುಲ್ಕ ಸಹಿತ ಪಾರ್ಕಿಂಗ್:
ಕಾಪು ಪೊಲೀಸ್ ಠಾಣೆ ಹಾಗೂ ಇತರ ಕಡೆ ಶುಲ್ಕ ಸಹಿತ ಪಾರ್ಕಿಂಗ್ ವ್ಯವಸ್ಥೆಗೆ ಜಾಗ ಗುರುತಿಸಲಾಗಿದೆ. ಪುರಸಭಾ ವ್ಯಾಪ್ತಿಯಲ್ಲಿ ಘನತ್ಯಾಜ್ಯ ಸಂಗ್ರಹಣೆಗೆ ದಾನಿಗಳು ವಾಹನಗಳನ್ನು ನೀಡಿದ್ದು, ಸಕ್ಕಿಂಗ್ ಯಂತ್ರದ ಅಗತ್ಯವಿದೆ. 14 ನೇ ಹಣಕಾಸು ಯೋಜನೆಯ ಅನುದಾನದಲ್ಲಿ ಅದನ್ನು ಖರೀದಿಸಲಾಗುವುದು ಎಂದು ಮುಖ್ಯಾಧಿಕಾರಿ ರಾಯಪ್ಪ ಹೇಳಿದರು.
ಕಾಮಗಾರಿಗಳ ವಿಳಂಬ ತಪ್ಪಿಸಲು 2017-18 ನೇ ಸಾಲಿನ ಎಸ್‌ಎಫ್‌ಸಿ ಮುಕ್ತ ನಿಧಿಯ ಕಾಮಗಾರಿಗಳಿಗೆ ಮಾರ್ಚ್ ಅಂತ್ಯದೊಳಗೆ ಕೌನ್ಸಿಲ್ ಅನುಮೋದನೆ ಪಡೆಯುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ ಎಂದರು.
ಕಾಮಗಾರಿಗಳ ಗುಣಮಟ್ಟ ಪರಿಶೀಲಿಸಲು ಪುರಸಭಾ ಸದಸ್ಯರನ್ನೊಳಗೊಂಡ ಪರಿಶೀಲನಾ ಸಮಿತಿ ರಚಿಸಬೇಕು. ಗುಣಮಟ್ಟ ಕಾಯ್ದುಕೊಳ್ಳದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಯಾವುದೇ ಕಾಮಗಾರಿ ಮಾಡುವ ಮೊದಲು ವಾರ್ಡ್ ಸದಸ್ಯರ ಗಮನಕ್ಕೆ ತರಬೇಕು, ಕೇವಲ ಗುದ್ದಲಿ ಪೂಜೆಗೆ ಆಹ್ವಾನಿಸುವುದಲ್ಲ ಎಂದು ವಿರೋಧ ಪಕ್ಷದ ನಾಯಕ ಅರುಣ್ ಶೆಟ್ಟಿ ದೂರಿದರು.
ಅಸಮಾಧಾನ: ಅಭಿವೃದ್ಧಿಗೆ ರೂ. 33 ಲಕ್ಷ ದೊಡ್ಡ ಕೆರೆಗೆ 17 ಲಕ್ಷ ಇದು ಯಾವ ನ್ಯಾಯ ಎಂದು ರಮೇಶ್ ಹೆಗ್ಡೆ ಪ್ರಶ್ನಿಸಿದರೆ, ಟೆಂಡರ್ ಬಳಿಕ ನನ್ನ ವಾರ್ಡ್‌ನ ಕಾಮಗಾರಿ ಸ್ಥಗಿತಗೊಂಡಿದೆ. ಬೇಡಿಕೆ ಇಟ್ಟ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದರಿಂದ ಜನರಿಗೆ ಹೇಗೆ ಉತ್ತರಕೊಡಲಿ ಎಂದು ಶಾಂತಲತಾ ಶೆಟ್ಟಿ ಅಸಮಾದಾನ ವ್ಯಕ್ತಪಡಿಸಿದರು.
ಪಕ್ಷಪಾತ ಬೇಡ: ಸಣ್ಣಕೆರೆ ಎಲ್ಲಾ ವಾರ್ಡ್‌ಗಳಿಗೆ ಸಮಾನ ನ್ಯಾಯವೊದಗಿಸಿ ಪಕ್ಷಪಾತ ಮಾಡದೆ ಯೋಜನೆ ರೂಪಿಸಿ ಎಂದು ಕಿರಣ್ ಆಳ್ವ ಆಗ್ರಹಿಸಿದರು. ಸಿಎಫ್‌ಎಲ್ ಬೀದಿ ದೀಪಗಳ ಬದಲಿಗೆ ಎಲ್‌ಇಡಿ ದೀಪಗಳನ್ನು ಅಳವಡಿಸುವಂತೆ ಸದಸ್ಯರು ಒತ್ತಾಯಿಸಿದರು.
ಕಾಪು ಪುರಸಭೆ ವ್ಯಾಪ್ತಿಯ ಸ್ವಚ್ಛ ಭಾರತ ಯೋಜನೆಯ ರಾಯಭಾರಿ ಶಿವಣ್ಣ ಬಾಯಾರ್ ಅವರು ಸ್ವಚ್ಛ ಸುಂದರ ಕಾಪು ನಿರ್ಮಾಣ ಕುರಿತು ಹೊರತಂದ ಸ್ಟಿಕ್ಕರ್‌ಗಳನ್ನು ಬಿಡುಗಡೆ ಮಾಡಲಾಯಿತು. ಪುರಸಭೆ ಅಧ್ಯಕ್ಷೆ ಸೌಮ್ಯ, ಉಪಾಧ್ಯಕ್ಷ ಕೆ.ಎಚ್. ಉಸ್ಮಾನ್, ಸ್ಥಾಯೀ ಸಮಿತಿ ಅಧ್ಯಕ್ಷ ಹಮೀದ್ ಮೂಳೂರು ಇದ್ದರು.







