ಬೆಳವಣಿಗೆ ಕುಂಠಿತ ಕಾರಣಕ್ಕೆ ಗರ್ಭಪಾತ ಸಲ್ಲದು: ಸುಪ್ರೀಂ
ಹೊಸದಿಲ್ಲಿ, ಮಾ.1: ಭ್ರೂಣದ ಬೆಳವಣಿಗೆ ಕುಂಠಿತ ಎಂಬ ಕಾರಣಕ್ಕೆ ಮಹಿಳೆ ಗರ್ಭಪಾತ ಮಾಡಿಸಿಕೊಳ್ಳುವಂತಿಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
26 ತಿಂಗಳ ಭ್ರೂಣ ಡೌನ್ ಸಿಂಡ್ರೋಮ್ (ವಂಶವಾಹಿ ದೋಷ)ನಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಗರ್ಭಪಾತಕ್ಕೆ ಅವಕಾಶ ನೀಡಬೇಕು ಎಂದು ಮುಂಬೈನ ಮಹಿಳೆಯೊಬ್ಬರು ಮಾಡಿಕೊಂಡಿದ್ದ ಮನವಿಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದೆ. ಭ್ರೂಣ ಬೆಳವಣಿಗೆ ಕುಂಠಿತವಾಗಿರುವ ಪರಿಣಾಮವಾಗಿ ಮಗು ಹುಟ್ಟುತ್ತಲೇ ದೈಹಿಕ ಹಾಗೂ ಮಾನಸಿಕ ಅಂಗವೈಕಲ್ಯ ಪಡೆಯಲಿದೆ ಎಂಬ ಹಿನ್ನೆಲೆಯಲ್ಲಿ ಮಹಿಳೆ, ಗರ್ಭಪಾತಕ್ಕೆ ಅನುಮತಿ ಕೋರಿದ್ದರು.
ನ್ಯಾಯಮೂರ್ತಿಗಳಾದ ಎಸ್.ಎ.ಬೋಬ್ಡೆ ಹಾಗೂ ಎಲ್.ಎನ್.ರಾವ್ ಅವರನ್ನು ಒಳಗೊಂಡ ಸುಪ್ರೀಂಕೋರ್ಟ್ ಪೀಠ, 37 ವರ್ಷದ ಮಹಿಳೆ ಬಗ್ಗೆ ಅನುಕಂಪ ವ್ಯಕ್ತಪಡಿಸಿದರೂ, ಮಾನಸಿಕ ಅಸ್ವಸ್ಥ ಮಗುವನ್ನು ತಾಯಿ ಬೆಳೆಸಲೇಬೇಕು. ಆ ಭ್ರೂಣವನ್ನು ತೆಗೆಸಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿತು. 20 ವಾರಗಳ ಬಳಿಕ ತಾಯಿಯ ಜೀವಕ್ಕೆ ಅಪಾಯವಿದ್ದರೆ ಹಾಗೂ ಭ್ರೂಣ ಉಳಿಯುವ ಸಾಧ್ಯತೆ ಇಲ್ಲ ಎಂದು ದೃಢಪಟ್ಟರೆ ಮಾತ್ರ ಗರ್ಭಪಾತಕ್ಕೆ ಅನುಮತಿ ನೀಡಲಾಗುವುದು ಎಂದು ಪೀಠ ಹೇಳಿತು.
ಮುಂಬೈನ ಕೆಇಎಂ ಆಸ್ಪತ್ರೆಯ ಹಿರಿಯ ವೈದ್ಯರು ಸಿದ್ಧಪಡಿಸಿದ ವೈದ್ಯಕೀಯ ವರದಿ ಆಧಾರದಲ್ಲಿ ಈ ತೀರ್ಪು ನೀಡಲಾಗಿದೆ. ಇದಕ್ಕೂ ಮುನ್ನ ಮಹಿಳೆ ಹಾಗೂ ಭ್ರೂಣದ ಆರೋಗ್ಯ ಪರೀಕ್ಷಿಸಲು ತಜ್ಞ ವೈದ್ಯರ ತಂಡವನ್ನು ಸುಪ್ರೀಂಕೋರ್ಟ್ ನೇಮಿಸಿತ್ತು. ಈ ವರದಿ ಅನ್ವಯ ಭ್ರೂಣ ಡೌನ್ ಸಿಂಡ್ರೋಮ್‌ನಿಂದ ಬಳಲುತ್ತಿದ್ದು, ಮಗು ಹುಟ್ಟುವಾಗಲೇ ದೈಹಿಕ ಅಥವಾ ಮಾನಸಿಕ ಅಂಗವೈಕಲ್ಯಕ್ಕೆ ತುತ್ತಾಗುವ ಸಾಧ್ಯತೆ ಇದೆ. ಆದರೆ ಭ್ರೂಣಕ್ಕಾಗಲೀ, ತಾಯಿಗಾಗಲೀ ಯಾವುದೇ ಅಪಾಯ ಇಲ್ಲ ಎಂದು ವರದಿ ವಿವರಿಸಿತ್ತು.
ಇಂಥ ಜನ್ಮದತ್ತ ದೋಷದ ಮಕ್ಕಳು ಕೂಡಾ ಸಾಮಾನ್ಯ ಮಕ್ಕಳಂತೆ ಪ್ರೀತಿ ಹಾಗೂ ಅನುಕಂಪಕ್ಕೆ ಅರ್ಹರು. ಈ ಹಿನ್ನೆಲೆಯಲ್ಲಿ ಗರ್ಭಪಾತಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ತೀರ್ಪಿನಲ್ಲಿ ಹೇಳಲಾಗಿದೆ.