ಈ ಸುದ್ದಿ ಓದಿ ಟೆನ್ಷನ್ ಹೆಚ್ಚಿಸಿಕೊಳ್ಳಬೇಡಿ!
ರಿಲ್ಯಾಕ್ಸ್ ಪ್ಲೀಸ್...
ಹೊಸದಿಲ್ಲಿ, ಮಾ.1: ದೇಶದಲ್ಲಿ ಪ್ರತಿ ಐದು ಮಂದಿಯ ಪೈಕಿ ಒಬ್ಬರು ಮಧುಮೇಹ ಹಾಗೂ ಹೈಪರ್ ಟೆನ್ಷನ್(ಅಧಿಕ ರಕ್ತದೊತ್ತಡ/ಬಿಪಿ) ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬ ಆಘಾತಕಾರಿ ಮಾಹಿತಿಯನ್ನು ಸರಕಾರ ನಡೆಸಿದ ಆರೋಗ್ಯ ಸಮೀಕ್ಷೆಯೊಂದು ಬಹಿರಂಗಪಡಿಸಿದೆ.
26 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಸಮೀಕ್ಷೆ ನಡೆಸಲಾಗಿದ್ದು, ದೇಶದ 125 ಕೋಟಿ ಮಂದಿಯ ಪೈಕಿ ಶೇ.20ರಷ್ಟು ಮಂದಿಗೆ ಈ ಆರೋಗ್ಯ ಸಮಸ್ಯೆ ಇದೆ ಎನ್ನುವುದು ಬೆಳಕಿಗೆ ಬಂದಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-4 ವರದಿಯಲ್ಲಿ ಈ ಅಂಶ ಬಹಿರಂಗವಾಗಿದೆ. ಒಟ್ಟಾರೆ ಮಧುಮೇಹ ಪ್ರಮಾಣ ಶೇ.20.3 ಹಾಗೂ ಹೈಪರ್ಟೆನ್ಷನ್ ರೋಗಿಗಳ ಪ್ರಮಾಣ ಶೇ.22.2 ಎಂದು ಮಂಗಳವಾರ ಬಿಡುಗಡೆಯಾದ ಸಮೀಕ್ಷಾ ವರದಿ ಹೇಳಿದೆ. ಕೆಲ ವ್ಯಕ್ತಿಗಳು ಈ ಎರಡೂ ರೋಗಗಳಿಂದ ಬಳಲುತ್ತಿದ್ದು, ವಾಸ್ತವ ಸಂಖ್ಯೆ ಈ ಅಂದಾಜಿಗಿಂತ ಹೆಚ್ಚಾಗಬಹುದು ಎಂದು ವರದಿ ಹೇಳಿದೆ.
ಮಧುಮೇಹ ಹಾಗೂ ಹೈಪರ್ ಟೆನ್ಷನ್ ಬಗೆಗೆ ಮೊಟ್ಟಮೊದಲ ಬಾರಿಗೆ ಸರಕಾರ ಸಮೀಕ್ಷೆ ಕೈಗೊಂಡಿತ್ತು. 2015-16ರಲ್ಲಿ ಈ ಸಮೀಕ್ಷೆ ನಡೆಸಲಾಗಿದ್ದು, 6 ಲಕ್ಷ ಕುಟುಂಬಗಳ ಏಳು ಲಕ್ಷ ಮಹಿಳೆಯರು ಹಾಗೂ 1.3 ಲಕ್ಷ ಪುರುಷರನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಕೆಲ ರಾಜ್ಯಗಳಲ್ಲಿ ಮಧುಮೇಹ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತ ಅಧಿಕವಿದ್ದು, ಗೋವಾ (ಶೇ. 33.7), ಪಶ್ಚಿಮ ಬಂಗಾಳ (28.2), ಅಸ್ಸಾಂ (34.6), ಒಡಿಶಾ (27.2) ರಾಜ್ಯಗಳಲ್ಲಿ ಅಧಿಕ ಪ್ರಮಾಣದ ಮಧುಮೇಹ ರೋಗಿಗಳಿದ್ದಾರೆ. ಹೈಪರ್ ಟೆನ್ಷನ್ ಅಧಿಕ ಇರುವ ರಾಜ್ಯಗಳೆಂದರೆ ಪಂಜಾಬ್ (ಶೇ. 35), ಸಿಕ್ಕಿಂ (44.8) ಹಾಗೂ ಮಹಾರಾಷ್ಟ್ರ (26).