ನಮಗೆ ದೇಶಭಕ್ತಿ ಕಲಿಸುವುದು ಬೇಡ: ಕಾರ್ಗಿಲ್ ಹುತಾತ್ಮನ ತಂದೆ
ಮೊಮ್ಮಗಳಿಗೆ ಅಜ್ಜನ ಬೆಂಬಲ

ಹೊಸದಿಲ್ಲಿ, ಮಾ.1: "ನಾಟ್ ಅಫ್ರೇಡ್ ಆಫ್ ಎಬಿವಿಪಿ’’ ಎಂಬ ಹ್ಯಾಶ್ ಟ್ಯಾಗ್ ಮೂಲಕ ಟ್ರೆಂಡಿಂಗ್ ಆಗಿದ್ದ ಹಾಗೂ ‘‘ಪಾಕಿಸ್ತಾನ ನನ್ನ ತಂದೆಯನ್ನು ಕೊಂದಿಲ್ಲ, ಯುದ್ಧ ನನ್ನ ತಂದೆಯನ್ನು ಕೊಂದಿತ್ತು’’ ಎಂಬ ಹೇಳಿಕೆಯಿಂದ ವಿವಾದಕ್ಕೀಡಾಗಿದ್ದ ಹುತಾತ್ಮ ಯೋಧರೊಬ್ಬರ ಪುತ್ರಿ ಗುರ್ಮೆಹರ್ ಕೌರ್, ಮಂಗಳವಾರ ವಿವಾದದಿಂದ ಬೇಸತ್ತು ತಾನು ಈ ಅಭಿಯಾನದಿಂದ ಹಿಂದೆ ಸರಿಯುವುದಾಗಿ ಹೇಳಿದ್ದರೂ ಇದೀಗ ಆಕೆಯ ಅಜ್ಜ ಕಮಲ್ ಜೀತ್ ಸಿಂಗ್ ಮೊಮ್ಮಗಳ ಬೆಂಬಲಕ್ಕೆ ನಿಂತಿದ್ದಾರೆ. ಕೌರ್ ಮಾಡಿದ್ದು ಸರಿ ಎಂದು ಹೇಳಿದ ಅವರು ತಮ್ಮ ಮೊಮ್ಮಗಳು ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಹಾಗೂ ವಿಶ್ವವಿದ್ಯಾನಿಲಯ ಕ್ಯಾಂಪಸ್ಸುಗಳಲ್ಲಿನ ಹಿಂಸೆಯನ್ನು ಅಂತ್ಯಗೊಳಿಸುವ ಸಲುವಾಗಿ ಹೇಳಿಕೆ ನೀಡಿದ್ದಳು ಎಂದಿದ್ದಾರೆ.
ಸುದ್ದಿವಾಹಿನಿಯೊಂದರೊಂದಿಗೆ ಮಾತನಾಡಿದ ಅವರು ಈ ವಿಚಾರವನ್ನು ಅನಗತ್ಯವಾಗಿ ಉತ್ಪ್ರೇಕ್ಷಿಸದಂತೆ ಸರಕಾರವನ್ನು ವಿನಂತಿಸಿದ್ದಾರೆ. ‘‘ಆಕೆ ಸರಿಯಾದುದ್ದನ್ನೇ ಮಾಡಿದ್ದಾಳೆ. ದೇಶ ಅಥವಾ ಯಾವುದೇ ರಾಜಕೀಯ ನಾಯಕರ ವಿರುದ್ಧ ಆಕೆ ಹೇಳಿಕೆ ನೀಡಿಲ್ಲ,’’ ಎಂದು ಸಿಂಗ್ ಹೇಳಿದ್ದಾರೆ. ‘‘ನಮ್ಮ ಪುತ್ರ ಹುತಾತ್ಮನಾಗಿದ್ದಕ್ಕೆ ನಾವು ಯಾರನ್ನು ದೂರಬೇಕು ? ಆತ ಯುದ್ಧದಲ್ಲಿ ಸಾವಿಗೀಡಾಗಿದ್ದಾನೆ. ಅದಕ್ಕೆ ನಾವು ಯಾರನ್ನು ದೂರಲಿ ?’’ ಎಂದು ಪ್ರಶ್ನಿಸಿದ್ದಾರೆ. ತಮ್ಮ ಮೊಮ್ಮಗಳ ಸುರಕ್ಷತೆಯ ಬಗ್ಗೆ ತಮಗೆ ಕಳವಳವಿದೆಯೆಂದೂ ಅವರು ಹೇಳಿದರು.
‘‘ಪಂಜಾಬಿಗಳು ದೇಶಕ್ಕಾಗಿ ಬದುಕುತ್ತಾರೆ. ನಮಗೆ ಯಾರೂ ದೇಶಭಕ್ತಿ ಕಲಿಸಬೇಕಾಗಿಲ್ಲ. ನಮ್ಮ ಪುತ್ರನನ್ನು ನಾವು ಕಳೆದುಕೊಂಡಿದ್ದೇವೆ. ನಾವು ಏನನ್ನೂ ಸಾಬೀತುಪಡಿಸಬೇಕಿಲ್ಲ,’’ ಎಂದು ಅವರು ಖಾರವಾಗಿ ನುಡಿದರು.