ಬಿಜೆಪಿ ಸಂಸದೆ ರೂಪಾ, ಪ್ರ.ಕಾರ್ಯದರ್ಶಿ ಕೈಲಾಶ್ ಹೆಸರು ಹೇಳಿದ ಮಕ್ಕಳ ಅಕ್ರಮ ಸಾಗಾಟ ಆರೋಪಿ

ಹೊಸದಿಲ್ಲಿ, ಮಾ.1: ಉತ್ತರ ಬಂಗಾಳದಲ್ಲಿ ಇತ್ತೀಚೆಗೆ ನಡೆದ ಮಕ್ಕಳ ಕಳ್ಳ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್‌ವರ್ಗಿಯಾ ಹಾಗೂ ಮಹಿಳಾ ಘಟಕದ ಅಧ್ಯಕ್ಷೆ ಹಾಗೂ ರಾಜ್ಯಸಭಾ ಸದಸ್ಯೆ ರೂಪಾ ಗಂಗುಲಿ ಪ್ರಮುಖ ಆರೋಪಿಗಳೆಂದು ಉಲ್ಲೇಖಿಸಲಾಗಿದೆ.
ಬಿಜೆಪಿಯ ಕೇಂದ್ರ ಹಾಗೂ ರಾಜ್ಯ ನಾಯಕರ ಹೆಸರು ಮಕ್ಕಳ ಕಳ್ಳ ಸಾಗಣೆ ಪ್ರಕರಣದಲ್ಲಿ ಉಲ್ಲೇಖವಾಗಿರುವುದು ಪಕ್ಷಕ್ಕೆ ತೀವ್ರ ಮುಜುಗರಕ್ಕೆ ಕಾರಣವಾಗಿದೆ.
ರಾಜ್ಯ ಬಿಜೆಪಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಜೂಹಿ ಚೌಧರಿ ಶಿಶುಪಾಲನಾ ಕೇಂದ್ರದ ಬಗೆಗಿನ ಕೆಲವು ಸಮಸ್ಯೆಯನ್ನು ಪರಿಹರಿಸಿಕೊಡುವಂತೆ ವಿಜಯ ವರ್ಗಿಯಾ ಹಾಗೂ ರೂಪಾ ಗಂಗುಲಿ ಬಳಿ ಮಾತನಾಡಿದ್ದರು ಎಂದು ೆಉತ್ತರ ಬಂಗಾಳದಲ್ಲಿ ಮಕ್ಕಳ ಆರೈಕೆ ಕೇಂದ್ರವನ್ನು ನಡೆಸುತ್ತಿರುವ ಆರೋಪಿ ಚಂದನ್ ಚಕ್ರವರ್ತಿ ಮಂಗಳವಾರ ಆಪಾದಿಸಿದ್ದಾರೆ.
ಆರೋಪ ನಿರಾಕರಿಸಿದ ಬಿಜೆಪಿ: ‘‘ನಾನು ಯಾವುದೇ ಕೇಂದ್ರದ ಬಿಜೆಪಿ ನಾಯಕರೊಂದಿಗೆ ಮಾತನಾಡಿಲ್ಲ. ಜೂಹಿ ಅವರು ರೂಪಾ ಗಂಗುಲಿ ಹಾಗೂ ಕೈಲಾಶ್ ವಿಜಯವರ್ಗಿಯಾರೊಂದಿಗೆ ಮಾತನಾಡಿದ್ದಾರೆ. ಈ ವೇಳೆ ಅವರಿಂದ ಸಹಾಯವನ್ನು ಕೇಳಿದ್ದಾರೆ. ಶಿಶು ಪಾಲನಾ ಕೇಂದ್ರವನ್ನು ನಡೆಸಲು ಎದುರಾಗಿರುವ ಎಲ್ಲ ಸಮಸ್ಯೆ ಬಗೆಹರಿಸಿಕೊಡುವುದಾಗಿ ರೂಪಾ ಗಂಗುಲಿ ಭರವಸೆ ನೀಡಿದ್ದರು. ಅವರು ಮಾತನಾಡುತ್ತಿದ್ದಾಗ ನಾನು ಮತ್ತೊಂದು ಕೊಠಡಿಯಲ್ಲಿ ಕುಳಿತ್ತಿದ್ದೆ’’ ಎಂದು ಸ್ಥಳೀಯ ನ್ಯಾಯಾಲಯಕ್ಕೆ ಹಾಜರಾಗುವ ಮೊದಲು ಸಿಲಿಗುರಿಯಲ್ಲಿ ಪತ್ರಕರ್ತರೊಂದಿಗೆ ಚಕ್ರವರ್ತಿ ಮಾತನಾಡುತ್ತಾ ತಿಳಿಸಿದ್ದರು.
ಆರೋಪವನ್ನು ನಿರಾಕರಿಸಿದ ವಿಜಯ್‌ವರ್ಗಿಯಾ ಕೋಲ್ಕತಾ ಪೊಲೀಸರು ತೃಣಮೂಲ ಕಾಂಗ್ರೆಸ್‌ನಿಂದ ನಿಯಂತ್ರಿಸಲ್ಪಡುತ್ತಿದ್ದಾರೆ. ಅವರು(ಕೋಲ್ಕತಾ ಪೊಲೀಸ್) ನನ್ನ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ. ಅವರು ಈಗಾಗಲೇ ನಮ್ಮ ಪಕ್ಷದ ಇಬ್ಬರು ನಾಯಕರನ್ನು ಗುರಿ ಮಾಡಿದ್ದಾರೆ. ಇದೀಗ ನನ್ನನ್ನು ಮಾಡಿದ್ದಾರೆ ಎಂದು ಆರೋಪಿಸಿದರು.
ಮಕ್ಕಳ ಕಳ್ಳ ಸಾಗಾಣಿಕೆಯ ಪ್ರಕರಣವನ್ನು ಬೇಧಿಸಿರುವ ರಾಜ್ಯ ಅಪರಾಧ ತನಿಖಾ ಇಲಾಖೆ ಕಳೆದ ವಾರ ಮಕ್ಕಳ ಆರೈಕೆ ಕೇಂದ್ರದ ಮಾಲಕ ಚಂದನ್ ಚಕ್ರವರ್ತಿ ಹಾಗೂ ಅವರ ಸಹಾಯಕನನ್ನು ಬಂಧಿಸಿತ್ತು. ಈ ಕೇಸ್‌ಗೆ ಸಂಬಂಧಿಸಿ ಕೆಲವೇ ದಿನಗಳಲ್ಲಿ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿತ್ತು.







