ಇಸ್ರೇಲ್‌ನ ಯಶಸ್ವಿ ಟೆನಿಸ್ ತಾರೆ ಶಹರ್ ಪೀರ್ ನಿವೃತ್ತಿ

ಜೆರುಸಲೇಂ,ಮಾ.1: ಇಸ್ರೇಲ್‌ನ ಅತ್ಯಂತ ಯಶಸ್ವಿ ಟೆನಿಸ್ ಆಟಗಾರ್ತಿ ಶಹರ್ ಪೀರ್ ದೀರ್ಘಕಾಲದಿಂದ ಬಾಧಿಸುತ್ತಿರುವ ಭುಜನೋವಿನ ಹಿನ್ನೆಲೆಯಲ್ಲಿ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ.
29ರ ಹರೆಯದ ಪೀರ್ ಮಾಜಿ ವಿಶ್ವದ ನಂ.11ನೆ ಆಟಗಾರ್ತಿಯಾಗಿದ್ದು, 2007ರಲ್ಲಿ ಪ್ರತಿಷ್ಠಿತ ಆಸ್ಟ್ರೇಲಿಯನ್ ಓಪನ್ ಹಾಗೂ ಅಮೆರಿಕನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದರು. ಐದು ಬಾರಿ ಡಬ್ಲುಟಿಎ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದರು.
ಇತ್ತೀಚೆಗಿನ ದಿನಗಳಲ್ಲಿ ನಿರಂತರವಾಗಿ ಗಾಯದ ಸಮಸ್ಯೆಯನ್ನು ಎದುರಿಸುತ್ತಿದ್ದ ಪೀರ್ 2016ರಲ್ಲಿ ಮಾಂಟೆರಿ ಓಪನ್‌ನಲ್ಲಿ ಕೊನೆಯ ಬಾರಿ ಆಡಿದ್ದರು. ಆ ಟೂರ್ನಿಯಲ್ಲಿ ಮೊದಲ ಸುತ್ತಿನಲ್ಲಿ ಸೋತು ಕೂಟದಿಂದ ಹೊರ ನಡೆದಿದ್ದರು.
‘‘ನನ್ನ ಜೀವನದಲ್ಲಿ ತೆಗೆದುಕೊಂಡಂತಹ ಅತ್ಯಂತ ಕಠಿಣ ನಿರ್ಧಾರವನ್ನು ನಿಮ್ಮಂದಿಗೆ ಹಂಚಿಕೊಳ್ಳಲು ಬಯಸುವೆ. 13 ವರ್ಷಗಳ ಅಂತಾರಾಷ್ಟ್ರೀಯ ವೃತ್ತಿಪರ ಟೆನಿಸ್‌ನಿಂದ ನಿವೃತ್ತಿಯಾಗುತ್ತಿರುವೆ. ನನ್ನನ್ನು ದೀರ್ಘಕಾಲದಿಂದ ಬಾಧಿಸುತ್ತಿರುವ ಭುಜದ ನೋವಿನಿಂದಾಗಿ ನಾನು ಈ ನಿರ್ಧಾರ ತೆಗೆದುಕೊಂಡಿರುವೆ. ಭುಜನೋವಿನಿಂದಾಗಿ ಕಳೆದ ಎರಡು ವರ್ಷಗಳಿಂದ ಸಕ್ರಿಯ ಟೆನಿಸ್‌ನಲ್ಲಿ ಆಡಲು ಸಾಧ್ಯವಾಗಿಲ್ಲ’’ ಎಂದು ಫೇಸ್‌ಬುಕ್ ಪೇಜ್‌ನಲ್ಲಿ ಪೀರ್ ಬರೆದಿದ್ದಾರೆ. 2004ರಲ್ಲಿ ವೃತ್ತಿಪರ ಟೆನಿಸ್‌ಗೆ ಕಾಲಿಟ್ಟಿರುವ ಪೀರ್ 2011ರಲ್ಲಿ ಜೀವನಶ್ರೇಷ್ಠ 11ನೆ ರ್ಯಾಂಕಿಗೆ ತಲುಪಿದ್ದರು. ಆದರೆ, 2015ರಲ್ಲಿ 177ನೆ ರ್ಯಾಂಕಿಗೆ ಕುಸಿದಿದ್ದರು.
2008ರಲ್ಲಿ ಕತರ್ ಓಪನ್‌ನಲ್ಲಿ ಸ್ಪರ್ಧಿಸಿದ್ದ ಇಸ್ರೇಲ್‌ನ ಮೊದಲ ಆಟಗಾರ್ತಿ ಎಂಬ ಕೀರ್ತಿಗೆ ಭಾಜನರಾಗಿದ್ದರು. ತನ್ನ ದೇಶದ ಪರ 75 ಫೆಡ್ ಕಪ್ ಪಂದ್ಯಗಳನ್ನು ಆಡಿದ್ದ ಪೀರ್ 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಇಸ್ರೇಲ್‌ನ್ನು ಪ್ರತಿನಿಧಿಸಿದ್ದರು.







