ಶೂಟಿಂಗ್ ವಿಶ್ವಕಪ್: ಜಿತು ರಾಯ್‌ಗೆ ಚಿನ್ನ

ಹೊಸದಿಲ್ಲಿ, ಮಾ.1: ಶೂಟಿಂಗ್ ವಿಶ್ವಕಪ್‌ನಲ್ಲಿ ಬುಧವಾರ ನಡೆದ 50 ಮೀ. ಪುರುಷರ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ಶೂಟರ್ ಜಿತು ರಾಯ್ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ.
ಮಂಗಳವಾರ 10 ಮೀ. ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಜಯಿಸಿದ್ದ ಜಿತು ಇದೀಗ ಸತತ 2ನೆ ದಿನವೂ ಪದಕವನ್ನು ಬಾಚಿಕೊಂಡರು.
50 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ಅಮನ್‌ಪ್ರೀತ್ ಸಿಂಗ್ ಒಟ್ಟು 226.9 ಅಂಕವನ್ನು ಗಳಿಸಿ ಬೆಳ್ಳಿ ಪದಕವನ್ನು ಜಯಿಸಿದ್ದಾರೆ. ತನ್ನ ಮೊದಲ ವಿಶ್ವಕಪ್ ಪಂದ್ಯದಲ್ಲಿ ಸಿಂಗ್ ಉತ್ತಮ ಸಾಧನೆ ಮಾಡಿ ಗಮನ ಸೆಳೆದರು.
ಇದಕ್ಕೆ ಮೊದಲು ನಡೆದಿದ್ದ ಅರ್ಹತಾ ಸುತ್ತಿನಲ್ಲಿ ಒಟ್ಟು 561 ಅಂಕ ಗಳಿಸಿದ್ದ ಅಮನ್‌ಪ್ರೀತ್ ಹಾಗೂ ಜೀತು(559 ಅಂಕ) ಕ್ರಮವಾಗಿ ಮೊದಲನೆ ಹಾಗೂ ಎರಡನೆ ಸ್ಥಾನ ಪಡೆದಿದ್ದರು.
ಜಿತು ಇದೀಗ ಒಟ್ಟು 9 ವಿಶ್ವಕಪ್ ಪದಕಗಳನ್ನು ಜಯಿಸಿದ್ದಾರೆ. ಈ ವರ್ಷ 2 ಹಾಗೂ ಕಳೆದ ವರ್ಷ 7 ಪದಕಗಳನ್ನು ಜಿತು ಗೆದ್ದುಕೊಂಡಿದ್ದಾರೆ. 2016ರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಜಿತು ರಾಯ್ ರಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದರು. ಆದರೆ, ಫೈನಲ್ಸ್‌ನಲ್ಲಿ 8ನೆ ಸ್ಥಾನ ಪಡೆದಿದ್ದರು.
ಜಿತು ಚಿನ್ನದ ಪದಕ ಗೆಲ್ಲುವುದರೊಂದಿಗೆ ಹೊಸದಿಲ್ಲಿಯಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಭಾರತದ ಖಾತೆಗೆ ಒಟ್ಟು 5 ಪದಕಗಳು ಜಮೆಯಾಗಿವೆ.







