ನೆರೆಯವನ ಜೊತೆ ಜಗಳದಲ್ಲಿ ಮಗಳನ್ನೇ ಇರಿದು ಕೊಂದ ತಂದೆ !

ಮುಂಬೈ, ಮಾ.1: ಗೋರೆಗಾಂವ್ ಇಲ್ಲಿನ ನಿವಾಸಿಯೊಬ್ಬ ನೆರೆಮನೆಯಾತನ ಜತೆ ಜಗಳ ಮಾಡುವ ಭರದಲ್ಲಿ ತನ್ನ 16 ವರ್ಷದ ಮಗಳ ಮೇಲೆಯೇ ಬಿದ್ದ ಪರಿಣಾಮ ಆತನ ಕೈಯ್ಯಲ್ಲಿದ್ದ ಚಾಕು ಆಕೆಯ ಎದೆಗೆ ಇರಿದು ಆಕೆ ಮೃತ ಪಟ್ಟ ಘಟನೆ ಸೋಮವಾರ ನಡೆದಿದೆ.
ಮೃತ ಯುವತಿ ಮೇಘಾ ಜೂನಿಯರ್ ಕಾಲೇಜೊಂದರ ಪ್ರಥಮ ವರ್ಷದ ವಿದ್ಯಾರ್ಥಿನಿಯಾಗಿದ್ದು ತನ್ನ ಹೆತ್ತವರು ಮತ್ತು ಹಿರಿಯ ಸಹೋದರಿಯೊಂದಿಗೆ ಸಿದ್ಧಾರ್ಥ ನಗರದಲ್ಲಿ ವಾಸವಾಗಿದ್ದಳು. ಆ ದಿನ ಬೆಳಿಗ್ಗೆ ಆಕೆ ಮನೆ ಪಕ್ಕದಲ್ಲಿ ಜಾರಿ ಬಿದ್ದ ನಂತರ ನೆರೆಮನೆಯವರೊಂದಿಗೆ ಜಗಳವಾಡಿದ್ದಳು. ಆ ಮನೆಯವರು ದಾರಿಯಲ್ಲಿಯೇ ಬಟ್ಟೆಗಳನ್ನು ಒಗೆದು ಆ ಸ್ಥಳವನ್ನು ಸರಿಯಾಗಿ ಶುಚಿಗೊಳಿಸದ ಕಾರಣ ಮೇಘಾ ಬಿದ್ದಿದ್ದಳು. ಈ ವಿಚಾರ ಎರಡೂ ಕುಟುಂಬಗಳ ನಡುವೆ ಘರ್ಷಣೆಗೆ ಕಾರಣವಾಗಿ ಪೊಲೀಸರೂ ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿ ಎರಡೂ ಕುಟುಂಬಗಳಿಗೆ ಎಚ್ಚರಿಕೆ ನೀಡಿ ಹೋಗಿದ್ದರು.
ಆದರೆ ಸಂಜೆಯ ವೇಳೆ ಮತ್ತೆ ಎರಡೂ ಕುಟುಂಬಗಳು ಕಾಲು ಕೆರೆದು ಜಗಳಕ್ಕೆ ನಿಂತಿದ್ದವು. ಮೇಘಾ ಮತ್ತಾಕೆಯ ಸಹೋದರಿ ನೆರೆಮನೆಗೆ ಹೋಗಿ ಜಗಳವಾಡುತ್ತಿದ್ದಾಗ ಅಲ್ಲಿ ಯಾರೋ ಆಕೆಗೆ ಬಕೆಟ್ಟಿನಿಂದ ಹೊಡೆದಿದ್ದನ್ನು ತಿಳಿದು ಅವರ ತಂದೆ ರಾಜೇಶ್ ಅವಘಾನೆ ಕೋಪದಿಂದ ಕೈಯ್ಯಲ್ಲಿ ಚಾಕುವೊಂದನ್ನು ಹಿಡಿದು ನೆರೆಮನೆಗೆ ಧಾವಿಸಿದ್ದ. ಅಲ್ಲಿ ಹೊಯ್‌ಕೈ ವೇಳೆ ಮೇಘಾ ಮತ್ತಾಕೆಯ ಸಹೋದರಿ ನೆಲಕ್ಕೆ ಬಿದ್ದು ಅವರ ಮೇಲೆ ರಾಜೇಶ್ ಬಿದ್ದಾಗ ಆತನ ಕೈಯ್ಯಲ್ಲಿದ್ದ ಚಾಕು ಆತನ ಅರಿವಿಲ್ಲದಂತೆಯೇ ಮೇಘಾಳ ಎದೆಗೆ ಇರಿದಿತ್ತು. ಪೊಲೀಸರು ಮೇಘಾಳ ತಂದೆ ಸೇರಿದಂತೆ ಏಳು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇಲ್ಲಿಯ ತನಕ ಆರು ಮಂದಿಯನ್ನು ಬಂಧಿಸಲಾಗಿದೆ.