10ಕ್ಕೂ ಅಧಿಕ ನಿಷೇಧಿತ ನೋಟುಗಳಿದ್ದರೆ ದಂಡ ವಿಧಿಸುವ ಕಾನೂನು ಜಾರಿ

ಹೊಸದಿಲ್ಲಿ,ಮಾ.1: 10ಕ್ಕೂ ಅಧಿಕ ನಿಷೇಧಿತ ನೋಟುಗಳನ್ನು ಹೊಂದಿದ್ದರೆ ಕನಿಷ್ಠ 10,000 ರೂ.ದಂಡ ವಿಧಿಸುವ ಕಾನೂನು ಜಾರಿಗೆ ಬಂದಿದ್ದು, ಈ ಸಂಬಂಧ ಸರಕಾರವು ಅಧಿಸೂಚನೆಯನ್ನು ಹೊರಡಿಸಿದೆ.
ಅಮಾನ್ಯಗೊಂಡಿರುವ ಹಳೆಯ 500 ಮತ್ತು 1,000 ರೂ.ನೋಟುಗಳನ್ನು ಬಳಸಿ ‘ಸಮಾನಾಂತರ ಆರ್ಥಿಕತೆಯನ್ನು ನಡೆಸುವ ಸಾಧ್ಯತೆಯನ್ನು ’ನಿವಾರಿಸುವ ಉದ್ದೇಶದಿಂದ ನಿರ್ದಿಷ್ಟ ಬ್ಯಾಂಕ್ ನೋಟುಗಳ (ಹೊಣೆಗಾರಿಕೆಗಳ ಸಮಾಪ್ತಿ) ಕಾಯ್ದೆ,2017ನ್ನು ಸಂಸತ್ತು ಕಳೆದ ತಿಂಗಳು ಅಂಗೀಕರಿಸಿತ್ತು.
ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಫೆ.27ರಂದು ಸಹಿ ಹಾಕಿರುವ ಕಾನೂನು 2016, ನ.9-ಡಿ.30ರ ನೋಟು ರದ್ದತಿ ಅವಧಿಯಲ್ಲಿ ವಿದೇಶಗಳಲ್ಲಿದ್ದ ಮತ್ತು ಹಳೆಯ ನೋಟುಗಳನ್ನು ಮಾ.31ರವರೆಗೆ ಆರ್‌ಬಿಐನಲ್ಲಿ ಜಮೆ ಮಾಡಲು ಸಮಯಾವಕಾಶ ಹೊಂದಿರುವ ವ್ಯಕ್ತಿಗಳು ಸುಳ್ಳು ಘೋಷಣೆಯನ್ನು ಸಲ್ಲಿಸಿದರೆ 50,000 ರೂ.ವರೆಗೆ ದಂಡ ವಿಧಿಸಲೂ ಅವಕಾಶ ಕಲ್ಪಿಸುತ್ತದೆ.
ಇದೀಗ ನೂತನ ಕಾನೂನು ಜಾರಿಗೊಂಡಿರುವುದರಿಂದ ವ್ಯಕ್ತಿಗಳು 10ಕ್ಕಿಂತ ಅಧಿಕ ಮತ್ತು ಅಧ್ಯಯನ ಹಾಗೂ ಸಂಶೋಧನೆಗಾಗಿ ಅಥವಾ ನಾಣ್ಯಶಾಸ್ತ್ರ ಉದ್ದೇಶಕ್ಕಾಗಿ 25ಕ್ಕಿಂತ ಹೆಚ್ಚು ಹಳೆಯ ನೋಟುಗಳನ್ನು ಹೊಂದಿರುವುದು ಕ್ರಿಮಿನಲ್ ಅಪರಾಧವಾಗುತ್ತದೆ ಮತ್ತು ಅಂತಹವರಿಗೆ 10,000 ರೂ. ಅಥವಾ ಪತ್ತೆಯಾದ ನೋಟುಗಳ ಐದು ಪಟ್ಟು.....ಇವುಗಳ ಪೈಕಿ ಯಾವುದು ಹೆಚ್ಚೋ ಅಷ್ಟು ಮೊತ್ತದ ದಂಡವನ್ನು ವಿಧಿಸಲಾಗುತ್ತದೆ.