200ರೂ.ನೀಡದ್ದಕ್ಕೆ ನವಜಾತ ಶಿಶುವಿನ ಶವ ಬಿಟ್ಟು ಕೊಡದ ದಾದಿ: ಬೀದಿ ನಾಯಿಯ ಪಾಲಾದ ಶವ

ಪಾಟ್ನ,ಜೂ.1: ಬಿಹಾರದ ರೂಪೌಲಿ ರೆಫರಲ್ ಆಸ್ಪತ್ರೆಯ ನರ್ಸ್ 200ರೂಪಾಯಿ ಕೊಡದ್ದಕ್ಕಾಗಿ ಮಹಿಳೆಯ ನವಜಾತ ಶಿಶುವಿನ ಮೃತದೇಹವನ್ನು ಮನೆಯವರಿಗೊಪ್ಪಿಸಲು ನಿರಾಕರಿಸಿದ ಘಟನೆ ನಡೆದಿದೆ. ಆದ್ದರಿಂದ ಅನಿವಾರ್ಯವಾಗಿ ಆ ಮಹಿಳೆ ತಾನು ಹೆತ್ತ ಶಿಶುವಿನ ಶವವನ್ನು ಆಸ್ಪತ್ರೆಯಲ್ಲೇ ಬಿಟ್ಟು ಹೊರಟು ಹೋಗಿದ್ದಳು.
ಆಕೆ ಹೋದ ಕೆಲವೇ ಸಮಯದಲ್ಲಿ ಅದೇ ಶಿಶುವಿನ ಶವವನ್ನು ಬೀದಿ ನಾಯಿಯೊಂದು ಎಳೆದೊಯ್ಯುತ್ತಿರುವುದನ್ನು ಅಲ್ಲಿದ್ದ ಕೆಲವರು ನೋಡಿದ್ದಾರೆ. ನಾಯಿಯನ್ನು ಓಡಿಸಿ ಅವರು ಶಿಶುವಿನ ಶವವನ್ನು ವಶಪಡಿಸಿಕೊಂಡಿದ್ದಾರೆ.. ಆದರೆ ಅಷ್ಟರಲ್ಲಿ ನಾಯಿ ಶವದ ಕೆಲವು ಭಾಗವನ್ನು ತಿಂದು ಮುಗಿಸಿತ್ತು.
ಸೋಮವಾರ ಮಧ್ಯಾಹ್ನ ದೀಪನಾರಾಯಣ್ ಮಂಡಲ್ ಎನ್ನುವವರ ಪತ್ನಿ ತನ್ನ ಪುತ್ರಿ ಕಲ್ಪನಾರನ್ನು ಹೆರಿಗೆಗಾಗಿ ರೂಪೌಲಿ ರೆಫರಲ್ ಆಸ್ಪತ್ರೆಗೆ ಕರೆತಂದಿದ್ದರು. ಅಲ್ಲಿದ್ದ ದಾದಿ 200ರೂಪಾಯಿ ಕೊಟ್ಟರೆ ಮಾತ್ರ ಇಲ್ಲಿ ಹೆರಿಗೆ ಮಾಡಿಸಲಾಗುತ್ತದೆ ಎಂದು ಹೇಳಿದ್ದಾಳೆ.
ಪುತ್ರಿಯ ನೋವನ್ನು ಕಂಡು ಮಂಡಲ್‌ರ ಪತ್ನಿ ಮಂಜು 2000 ರೂಪಾಯಿ ಕೊಡುತ್ತೇನೆಂದು ಹೇಳಿದ್ದರು. ದಾದಿಗೆ ಕೂಡಲೇ ಅವರು 600ರೂಪಾಯಿ ಕೊಟ್ಟಿದ್ದಾರೆ. ಇನ್ನು ಔಷಧಕ್ಕೆಂದು 200 ರೂಪಾಯಿಯನ್ನು ದಾದಿ ಕಿತ್ತುಕೊಂಡಿದ್ದಳು. ಸೋಮವಾರ ರಾತ್ರಿ 9ಗಂಟೆಗೆ ಅವರ ಪುತ್ರಿ ಕಲ್ಪನಾಗೆ ಹೆರಿಗೆಯಾಗಿದೆ. ಆದರೆ ಮಗು ಮೃತಪಟ್ಟಿತ್ತು. ಬೆಳಗ್ಗೆ ಮಂಡಲ್‌ರ ಪತ್ನಿ ಊರಿಗೆ ಹೋಗುವ ಸಿದ್ಧತೆ ನಡೆಸುತ್ತಿದ್ದರು. ಆ ವೇಳೆ ದಾದಿ ಉಳಿದ ಹಣಕ್ಕಾಗಿ ಪೀಡಿಸಿದ್ದಾಳೆ.
ಅವರ ಬಳಿ ಉಳಿದಿದ್ದ 1,500ರೂಪಾಯಿಯನ್ನು ನರ್ಸ್‌ಗೆ ಕೊಟ್ಟರು. ಇನ್ನೂ ಇನ್ನೂರು ರೂಪಾಯಿ ಕೊಟ್ಟರೆ ಮಾತ್ರ ಮಗುವಿನ ಶವವನ್ನು ತೆಗೆದುಕೊಂಡು ಹೋಗಬಹುದು. ಇಲ್ಲದಿದ್ದರೆ ಇಲ್ಲೆಲ್ಲಾದರೂ ಅದನ್ನು ಹೂತು ಹಾಕಲಾಗುವುದು ಎಂದು ದಾದಿ ಹಟ ಹಿಡಿದಿದ್ದಳು. ಆದರೆ ಮಂಡಲ್‌ರ ಪತ್ನಿಯ ಬಳಿ ಹಣವಿರಲಿಲ್ಲ. ಮಗಳ ನವಜಾತ ಶಿಶುವಿನ ಶವವನ್ನು ಆಸ್ಪತ್ರೆಯಲ್ಲಿಯೇ ಬಿಟ್ಟು ಮಗಳನ್ನು ಕರೆದುಕೊಂಡು ಮನೆಗೆ ಹೋಗಿದ್ದರು.
ಅವರು ಆಸ್ಪತ್ರೆಯಿಂದ ಹೊರಟು ಹೋಗಿ ಸ್ವಲ್ಪಸಮಯ ಆಗುವಷ್ಟರಲ್ಲಿ ಶಿಶುವಿನ ಶವವನ್ನು ನಾಯಿ ಕಚ್ಚಿಕೊಂಡು ಪಕ್ಕದ ಗದ್ದೆಗೆ ಓಡಿಹೋಗಿತ್ತು. ಈ ಘಟನೆಯನ್ನು ತಿಳಿದ ಜನರು ಆಸ್ಪತ್ರೆಯ ವಿರುದ್ಧ ಆಕ್ರೋಶಗೊಂಡಿದ್ದಾರೆಂದು ವರದಿ ತಿಳಿಸಿದೆ.







