ಕೇರಳದ ಏಕೈಕ ಸರಕಾರಿ ಯುನಾನಿ ಆಸ್ಪತ್ರೆಗೆ 25 ವರ್ಷ ತುಂಬಿದರೂ ಮೂಲಭೂತ ಸೌಕರ್ಯದ ಕೊರತೆ!

ಕಾಸರಗೋಡು, ಫೆ.1: ಇಲ್ಲಿನ ಮೊಗ್ರಾಲ್ ಸರಕಾರಿ ಯುನಾನಿ ಆಸ್ಪತ್ರೆ ಅಭಿವೃದ್ಧಿ ಕೇವಲ ಕಡತಕ್ಕೆ ಸೀಮಿತವಾಗಿದೆ. 2015-16ನೆ ಸಾಲಿನ ಕೇರಳ ಮುಂಗಡ ಪತ್ರದಲ್ಲಿ ಆಸ್ಪತ್ರೆಯ ಅಭಿವೃದ್ಧಿಗೆ 25 ಲಕ್ಷ ರೂ. ಮೀಸಲಿಡಲಾಗಿತ್ತು. ಆದರೆ ಈ ಅನುದಾನ ವಿನಿಯೋಗಿಸದೇ ಭರವಸೆಯಲ್ಲೇ ಉಳಿದುಕೊಂಡಿದೆ.
ಆಸ್ಪತ್ರೆ ಗೆ ಹೊಸಕಟ್ಟಡ ನಿರ್ಮಾಣ ಸೇರಿದಂತೆ ಹಲವು ಚಿಕಿತ್ಸಾ ಸೌಲಭ್ಯಕ್ಕೆ ಅನುದಾನ ಮೀಸಲಿಡಲಾಗಿತ್ತು. 1991ರಲ್ಲಿ ಕೇರಳದಲ್ಲಿ ಪ್ರಪ್ರಥಮ ಬಾರಿಗೆ ಕೇಂದ್ರ ಯೋಜನೆಯಡಿ ಯುನಾನಿ ಆಸ್ಪತ್ರೆ ಮಂಜೂರಾಗಿತ್ತು.
ಹಳೆ ಗ್ರಾಮ ಪಂಚಾಯತ್ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಆಸ್ಪತ್ರೆ ತೆರೆಯಲಾಗಿತ್ತು. ಬಳಿಕ ಸ್ಥಳೀಯಾಡಳಿತ ಅನುದಾನ ಬಳಸಿ ಕಟ್ಟಡ ನಿರ್ಮಿಸುವ ಯೋಜನೆ ಹಾಕಲಾಗಿತ್ತು. ಆದರೆ ಹೊಸ ಕಟ್ಟಡ ನಿರ್ಮಾಣ ಮೂಲೆಗುಂಪು ಮಾಡಲಾಗಿದೆ.
ಹಿಂದಿನ ಸರಕಾರ ಮುಂಗಡ ಪತ್ರದಲ್ಲಿ ಅನುದಾನ ಮೀಸಲಿಟ್ಟರೂ ಇದುವರೆಗೆ ಅನುಷ್ಠಾನಕ್ಕೆ ಬಂದಿಲ್ಲ. ಮೊಗ್ರಾಲ್ ನಲ್ಲಿ ಇರುವ ಈ ಆಸ್ಪತ್ರೆ ಕೇರಳದಲ್ಲಿ ಏಕೈಕ ಸರಕಾರಿ ಯುನಾನಿ ಆಸ್ಪತ್ರೆಯಾಗಿದೆ. ಈ ಆಸ್ಪತ್ರೆಗೆ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ನೂರಾರು ಮಂದಿ ಆಗಮಿಸುತ್ತಾರೆ.
ಆಸ್ಪತ್ರೆಯಲ್ಲಿ ಲ್ಯಾಬ್ ಸೌಲಭ್ಯ ಇಲ್ಲದೆ ಇರುವುದು, ವೈದ್ಯರ ಕೊರತೆ ರೋಗಿಗಳನ್ನು ಕಾಡುತ್ತಿದೆ. ಆಸ್ಪತ್ರೆ ಮಂಜೂರಾಗಿ 25 ವರ್ಷ ಕಳೆದರೂ ಅಭಿವೃದ್ಧಿಗೆ ಕ್ರಮ ತೆಗೆದುಕೊಳ್ಳದಿರುವುದು ನಾಗರಿಕರ ಪ್ರತಿಭಟನೆಗೆ ಕಾರಣವಾಗಿದೆ.







