ಸಮುದ್ರದ ನೀರು ಆಗಲಿದೆ ಸಿಹಿ?
ಮಂಗಳೂರು ನೀರು ಬೆಂಗಳೂರಿಗೆ

ಬೆಂಗಳೂರು, ಮಾ.1: ಮಂಗಳೂರಿನ ಸಮುದ್ರದ ಉಪ್ಪು ನೀರನ್ನು ಸಿಹಿ ನೀರಾಗಿ ಪರಿವರ್ತಿಸಿ ಅದನ್ನು ಬೆಂಗಳೂರು ನಗರಕ್ಕೆ ಕುಡಿಯುವ ನೀರಿಗೆ ಬಳಕೆ ಮಾಡುವ ಮಹತ್ವದ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿ.ಎಂ.ಧನಂಜಯ್ ಇಂದಿಲ್ಲಿ ಮಾಹಿತಿ ನೀಡಿದ್ದಾರೆ.
ಬುಧವಾರ ನಗರದ ರೇಸ್‌ಕೋರ್ಸ್ ರಸ್ತೆಯ ಖನಿಜ ಭವನದಲ್ಲಿರುವ ಕೆಎಸ್‌ಐಐಡಿಸಿ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಮುದ್ರದ ಉಪ್ಪು ನೀರನ್ನು ಸಿಹಿ ನೀರಾಗಿ ಪರಿವರ್ತಿಸಿ ಅದನ್ನು ಬೆಂಗಳೂರು ನಗರಕ್ಕೆ ಕುಡಿಯುವ ನೀರಿಗೆ ಬಳಕೆ ಮಾಡುವ ಮಹತ್ತರ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಅಲ್ಲದೆ, ತಮಿಳುನಾಡಿನಲ್ಲಿ ಈ ವ್ಯವಸ್ಥೆ ಯಶಸ್ವಿಯಾಗಿದೆ ಎಂದು ತಿಳಿಸಿದರು.
ಮಂಗಳೂರಿನಿಂದ ಸಮುದ್ರದ ನೀರನ್ನು ಸಂಸ್ಕರಿಸಿ ಕೊಳವೆ ಮೂಲಕ ಬೆಂಗಳೂರಿಗೆ ತಲುಪಿಸುವ ಗುರಿ ಹೊಂದಲಾಗಿದೆ. ಕೇಂದ್ರ ಸರಕಾರದ ಸ್ವಾಮ್ಯದ ಮೆಕಾನ್ ಸಂಸ್ಥೆಗೆ ಈ ಬಗ್ಗೆ ಸಾಧ್ಯತಾ ವರದಿ ಹಾಗೂ ಯೋಜನೆ ಅನುಷ್ಠಾನದ ಕುರಿತು ವರದಿ ನೀಡಲು ತಿಳಿಸಲಾಗಿದೆ.
ಗರಿಷ್ಠ ಒಂದು ವರ್ಷದಲ್ಲಿ ಯೋಜನೆಯನ್ನು 100 ಎಂಎಲ್‌ಡಿ ಸಮುದ್ರ ನೀರನ್ನು ಪ್ರಾಯೋಗಿಕವಾಗಿ ಮಂಗಳೂರಿನಲ್ಲೇ ಸಿಹಿನೀರನ್ನಾಗಿ, ಮಂಗಳೂರಿನಲ್ಲೇ ಬಳಸಲಾಗುತ್ತದೆ. ಬಳಿಕ ನೀರನ್ನು ಬೆಂಗಳೂರಿಗೆ ತಲುಪಿಸುವ ಬಗ್ಗೆ ಯೋಜನೆ ರೂಪಿಸಲಾಗುವುದು ಎಂದು ಧನಂಜಯ್ ಹೇಳಿದರು.
ಮಂಗಳೂರು ಸಮುದ್ರದ ನೀರು ಬೆಂಗಳೂರಿಗೆ ತೆಗೆದುಕೊಂಡು ಬರುವ ಸಂಬಂಧ ರಾಜ್ಯ ಸರಕಾರದ ಮಟ್ಟದಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು. ಇದು ನಿಗಮದ ಕನಸಿನ ಯೋಜನೆಯಾಗಿದೆ ಎಂದು ಅವರು ತಿಳಿಸಿದರು.
ತದಡಿ ಬಂದರಿಗೆ ಒಪ್ಪಿಗೆ: ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಉತ್ತರ ಕನ್ನಡ ಜಿಲ್ಲೆಯ ತದಡಿಯಲ್ಲಿ ಸರ್ವಋತು ಬಂದರು ನಿರ್ಮಾಣಕ್ಕೆ ಪರಿಸರ ವಿಭಾಗದಿಂದ ಅನುಮತಿ ದೊರೆತಿದೆ. ಕೆಲ ಸಮಯದಲ್ಲೇ ರಾಜ್ಯ ಅರಣ್ಯ ಇಲಾಖೆಯಿಂದಲೂ ಒಪ್ಪಿಗೆ ಪಡೆಯಲಾಗುತ್ತದೆ.
ಮೊದಲ ಹಂತದಲ್ಲಿ 34.25 ಎಂಟಿಪಿಎ ಸಾಮರ್ಥ್ಯದ ಬಂದರು ನಿರ್ಮಿಸಲಾಗುವುದು. ಒಟ್ಟಾರೆ 62.36 ಎಂಟಿಪಿಎ ಸಾಮರ್ಥ್ಯದ ಬಂದರು 3800 ಕೋಟಿ ರೂ.ನಲ್ಲಿ ನಿರ್ಮಾಣಗೊಳ್ಳಲಿದೆ. ಇದನ್ನು ಪ್ರವಾಸೋದ್ಯಮದ ದೃಷ್ಟಿಯಿಂದಲೂ ಬಳಸಲು ಯೋಜನೆ ಮಾಡಲಾಗುತ್ತಿದೆ ಎಂದು ಸಿ.ಎಂ.ಧನಂಜಯ್ ಇದೇ ವೇಳೆ ಮಾಹಿತಿ ನೀಡಿದರು.







